``ವೈದೇಹಿ ವಾಚಿಕೆ "
ನಮ್ಮ ಊರಿನ ವೈದೇಹಿಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ (೨೦೦೯)ಪ್ರಶಸ್ತಿ ಬಂದದ್ದು ಕುಂದಾಪುರದವರೆಲ್ಲರಿಗೆ ಖುಷಿ ತಂದಿದೆ. ಕುಂದಾಪುರ ಕನ್ನಡವನ್ನು ಬರಹದಲ್ಲಿ ಅವರೆಷ್ಟು ಚಂದವಾಗಿ, ಕಲಾತ್ಮಕವಾಗಿ ದುಡಿಸಿಕೊಂಡವರು ಬಹಳ ಅಪೂರ್ವ ಜನಸಮಾನ್ಯರ ಮಾತುಗಳನ್ನು ನಮ್ಮ ಭಾಷೆಯಲ್ಲಿ ಅದೆಷ್ಟು ನೈಜವಾಗಿ ಚಿತ್ರಿಸಿದ್ದಾರೆ. ಅವರಿಗೆ ಈ ಪ್ರಶಸ್ತಿ ಬಂದ ಕೂಡಲೇ ಎಂಬಂತೆ ``ವೈದೇಹಿ ವಾಚಿಕೆ" ಎಂಬ ಅವರ ಬರಹಗಳ ಪ್ರಾತಿನಿಧಿಕ ಅಯ್ಕೆಯ ಸಂಗ್ರಹ ಎನ್ನಬಹುದಾದ ಪುಟ ಪುಸ್ತಕ ಪ್ರಕಟವಾಗಿದೆ. (ವೈದೇಹಿ ವಾಚಿಕೆ ಸಂ:ಟಿ.ಪಿ. ಅಶೋಕ ಪುಟ:೧೪೪ ಬೆಲೆ ೧೦೦/- ಪ್ರ: ನುಡಿಪುಸ್ತಕ ಬೆಂಗಳೂರು ದೂರವಾಣಿ ೦೮೦-೨೬೭೧೧೩೨೯). ಈ ಸಂಗ್ರಹವನ್ನು ಪುಟ ಪುಸ್ತಕ ಎಂದು ಯಾಕೆ ಕರೆದೆನೆಂದರೆ ಅವರ ಬರಹದ ವ್ಯಾಪ್ತಿ ದೊಡ್ಡದು, ಅದನ್ನು ಪುಟ್ಯ ಸಂಗ್ರಹದಲ್ಲಿ ಹಿಡಿದಿಡುವುದು ಕಷ್ಟ-ಅಂಥ ಕಷ್ಟಕರ ಕೆಲಸವನ್ನು ವಿಮರ್ಶಕ ಶ್ರೀ ಟಿ.ಪಿ. ಅಶೋಕ ಮಾಡಿದ್ದಾರೆ.
ಕುಂದಾಪುರ ಪೇಟೆಯಲ್ಲಿ ಹುಟ್ಟಿ ಬೆಳೆದ ಜಾನಕಿಯವರು ವೈದೇಹಿಯಾಗಿ ಬೆಳೆದ ಪರಿ ಅದ್ಭುತ ಮತ್ತು ಅಭಿಮಾನ ಪುಟಿಸುವಂತಹದ್ದು, ತಾವು ನೋಡಿದ ಕತೆಯನ್ನು ತಾವು ಆಡಿದ ಕುಂದಾಪ್ರ ಕನ್ನಡವನ್ನು ಬಳಸಿಕೊಂಡು ಬರೆದದ್ದು ಒಂದು ಅಪರೂಪದ ಸಾಧನೆ. ``ವೈದೇಹಿ ವಾಚಿಕೆ"ಯ ಮುನ್ನೂಡಿಯಲ್ಲಿ ಟಿ.ಪಿ. ಅಶೋಕ ರವರು ಅವರ ಬರವಣಿಗೆಯ ಬೆಳವಣಿಗೆಯನ್ನು ಗುರುತಿಸಿದ್ದು, ಹೀಗೆ. ೧೯೭೯ ರಲ್ಲಿ ತಮ್ಮ ಮೊದಲ ಕಥಾ ಸಂಕಲನವನ್ನು ಪ್ರಕಟಿಸಿದ ವೈದೇಹಿ ಕಳೆದ ಮೂರು ದಶಕಗಳಲ್ಲಿ ಬೆಳೆದಿರುವ ಪರಿ ಓದು ಸಂತಸಭರಿತ ಅಚ್ಚರಿ. ಈ ಅವಧಿಯಲ್ಲಿ ಅವರ ಕಥನ ಕೌಶಲವು ಹೊಸ ಎತ್ತರಗಳಿಗೆ ಏರಿರುವಂತೆ ಅವರ ಲೋಕ ಗ್ರಹಿಕೆ ಮತ್ತು ಲೋಕ ದೃಷ್ಟಿಗಳೂ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಾ ಪ್ರಬುದ್ಧವಾಗುತ್ತ ಬಂದಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಅವರ ಸಾಹಿತ್ಯವು ಸಾಧಿಸಿ ಕೊಂಡಿರುವ ಪ್ರಕಾರ ವೈವಿಧ್ಯವು ಗಮನಾರ್ಹವಾಗಿದೆ. ಸಣ್ಣ ಕಥೆಯಿಂದ ಆರಂಭವಾಗಿ ಕಾವ್ಯ ಕಾಂದಬರಿ, ಪ್ರಬಂಧ, ನಾಡಕ ವಿವಿಧ ಪ್ರಕಾರಗಳಲ್ಲಿ ವಿಸ್ತರಿಸಿಕೊಂಡಿರುವ ಅವರ ಪ್ರಯೋಗಶೀಲತೆ ಮತ್ತು ಸಾಧನೆ ಎದ್ದು ಕಾಣುವಂತಿವೆ .... ಹಾಗೆಯೇ ಕೋಟ ಲಕ್ಷ್ಮೀ ನಾರಾಯಣ ಕಾರಂತ, ಸೇಡಿಯಾಪು ಕೃಷ್ಣ ಭಟ್ಟ, ಬಿ.ವಿ. ಕಾರಂತ, ಸರಸ್ವತಿ ಬಾಯಿ ರಾಜವಾಡೆ ಮುಂತಾದ ಗಣ್ಯರ ಆತ್ಮ ಚರಿತ್ರೆ ಅನುಭವ ಕಥನಗಳು...."
``ವೈದೇಹಿ ವಾಚಿಕೆ" ಸಂಗ್ರಹದಲ್ಲಿ ವೈದೇಹಿಯವರು ಬರೆದ ಸಣ್ಣ ಕಥೆಗಳು, ಕವನಗಳು, ನಾಟಕ, ಪ್ರಬಂಧ ಮತ್ತು ಕಾದಂಬರಿಯ ಆಯ್ದ ಭಾಗಗಳಿವೆ. ಅವರು ೧೯೯೨ ರಲ್ಲಿ ಬರೆದ ``ಅಸ್ಪ್ರಶ್ಯರು" ಕಾದಂಬರಿಯು ತನ್ನದೇ ರೀತಿಯಲ್ಲಿ ವಿಶಿಷ್ಟವಾಗಿದ್ದರೂ, ಯಾಕೋ ಇನ್ನೂ ಹೆಚ್ಚಿನ ಪ್ರಸಿದ್ದಿಯನ್ನು ಪಡೆಯಬೇಕಿತ್ತೇನೊ ಎಂದೆನಿಸುತ್ತದೆ. ಈ ವಾಚಿಕೆಯಲ್ಲಿರುವ ಆಯ್ದ ಭಾಗವು ಇತ್ತ ಕಥೆಯನ್ನು ಹೊಂದಿರುವಂತೆಯೇ ಅತ್ತ ಪ್ರಬಂಧದ ಗುಣವನ್ನು ಅಲ್ಲಲ್ಲಿ ಹೊಂದಿದೆ. ಬಾಣಂತಿಯರು ಆ ಕೆಲವು ದಿನಗಳಲ್ಲಿ ಅಸ್ಪ್ರಶ್ಯತೆಯನ್ನು ಅನುಭವಿಸುವುದು ಸಮಾಜವು ಹೇರಿದ ಆ ಅಸ್ಪ್ರಶ್ಯತೆಯಲ್ಲಿ ಮಹಿಳೆಯರು ಉಣ್ಣುವ ಅವಮಾನ ಇತ್ಯಾದಿಗಳ ಸೂಕ್ಷ್ಮ ಚಿತ್ರಣ ಅವುಗಳ ಮಧ್ಯೆ ಸಂಪ್ರದಾಯಸ್ಥ ಕುಟುಂಬವೊಂದರ ನೈಜ ಚಿತ್ರಣ ಸಹಜ ಸಂಭಾಷಣೆಯ ಮೂಲಕ ಕಥೆ ಮೂಡಿಬರುವ ಪರಿ ... ಅಪರೂಪದ್ದು. ಈ ಭಾಗದಲ್ಲಿ ಮಕ್ಕಳ ಲೋಕವೂ ಚಿತ್ರಣಗೊಂಡಿರುವುದರಿಂದ, ಲಲಿತ ಪ್ರಬಂಧದ ಛಾಯೆಯೂ ಅಲ್ಲಲ್ಲಿ ಇಣುಕುತ್ತಿದೆ. ಈ ಪ್ರಪಂಚದಲ್ಲಿ ಅಮಾವಾಸ್ಯೆಯ ದಿನ ಎಣ್ಣೆ ಕೇಳಲು ಬರುವ ನರಪಟೆಯು ಇನ್ನೊಂದು ಅಸ್ಪ್ರಶ್ಯ ಲೋಕದ ದರ್ಶನ ಮಾಡಿಸುತ್ತಾಳೆ. ``ಕೈಯಲ್ಲೊಂದು ಬಿದಿರಿನ ಬುಟ್ಟಿ ತಲೆಯ ಮೇಲೆ ಪಾಳೆಯ ಟೊಪ್ಪಿ ಸೊಂಟದಲ್ಲಿ ಐದೋ ಆರೋ ಕುಕ್ಕೆ ಅಥವಾ ಹೆಡಿಗೆ ಅತವಾ ಸಿಬ್ಬಲ. ಇಂತಿಷ್ಟು ಅಕ್ಕಿಗೆಂದೋ, ಚಕ್ಕರಕ್ಕೆಂದೋ (ನಾಲ್ಕಾಣೆ) ವ್ಯಾಪಾರ ಕುದುರುವುದುಂಟು. ಕೊಂಡಾದ ಮೇಲೆ ಚಂದು ಬಾವಿಯಿಂದ ನೀರೆತ್ತಿ ಅವುಗಳ ಮೇಲೆ ಹೊಯ್ದು ಶುದ್ದ ಮಾಡಿ ಒಳಗೆ ತಂದಿಡುತ್ತಾಳೆ. ಅಷ್ಟರವರೆಗೆ ಅವುಗಳನ್ನು ಮುಟ್ಟುವಂತಿಲ್ಲ..... ನರಪಟೆ ಬಂದರೆ ಒಂದು ಗೆರೆಟೆಯಲ್ಲಿ ಒಂದಿಷ್ಟು ಎಣ್ಣೆ ಸುರಿದು ಎಲ್ಲರ ತಲೆಗೆ ಸುಳಿದು ಹೆಚ್ಚು ಗ್ರಹಚಾರ ಇದ್ದವರನ್ನು ಕರೆದು ಅದರಲ್ಲಿ ತಮ್ಮ ಬಿಂಬ ನೋಡಲು ಹೇಳಿ ಅದನ್ನು ಅವಳಿಗೆ ಕೊಟ್ಟರಾಯಿತು. ಗ್ರಹಚಾರ ಓಡಿದಂತೆಯೇ...."
ಮನುಷ್ಯ ಕುಲದ ಎಲ್ಲಾ ಹೆಂಗೆಳೆಯರ ಬಿಕ್ಕಟ್ಟು, ದುಮ್ಮಾನ , ಅಪಮಾನ, ಬೇನೆ, ನೋವು, ಕಷ್ಟಗಳನ್ನು ವೈದೇಹಿಯವರು ತಮ್ಮ ಕಥೆಗಳಲ್ಲಿ ಹಿಡಿಯಲು ಯತ್ನಿಸುತ್ತಾರೇನೋ ಎಂದು ಒಮ್ಮೊಮ್ಮೆ ಅನಿಸುತ್ತದೆ. ಹೆಸರನ್ನು ಕೇಳಿದರೆ ರಾಮಾಯಣದ ನೆನಪಾಗುವ ``ಕ್ರೌಂಚ ಪಕ್ಷಿಗಳು " ಕಥೆಯಲ್ಲಿ ದೇಶ ವಿಭಜನೆಯ ಹಿನ್ನಲೆಯಲ್ಲಿ ದೌರ್ಜನ್ಯಕ್ಕೊಳಗಾಗುವ ಹೆಂಗಸೊಬ್ಬಳ ಚಿತ್ರಣವಿದೆ. ಗಲಭೆಯ ಸಮಯದಲ್ಲಿ ಗಂಡನೆದರೇ ಅಪಹರಣಕ್ಕೆ ಒಳಗಾಗುವ ಆಕೆ, ನಂತರ ಪುನರ್ವಸತಿ ಕೇಂದ್ರದಲ್ಲಿ ಗಂಡನ ಕಣ್ಣಿಗೆ ಬಿದ್ದರೂ, ಗಂಡ ಮಾತ್ರ ``.... ಮೈ ಮೇಲಿನ ಬೈರಾಸ್‌ನ್ನು ತಲೆಯ ಮೇಲೆ ಹಾಕಿಕೊಂಡು, ತಲೆಯಡಿ ಮಾಡಿಕೊಂಡು ಕರ್ಮಾಂತರಕ್ಕೆ ಹೊರಟವರ ಹಾಗೆ ವಾಪಸು ಹೋಗುತ್ತಾನೆ. ಈ ಹೆಂಗಸು ತನಗೆ ಗುರುತೇ ಇಲ್ಲ ಎಂದರಂತೆ ...!"
ಆ ಮಹಿಳೆಯ ಮಾತಿನಲ್ಲಿ ಹೊರಬರುವ ಈ ಸತ್ಯವು ರಾಮಾಯಣದ ಸೀತೆಯ ಪಾಡನ್ನು ನೆನಪಿಸುವ ಮೂಲಕ, ಕಥೆಗೆ ಹೊಸ ಆಯಾಮವನ್ನು ನೀಡುತ್ತದೆ. ಎಲ್ಲಿಯ ಸ್ವಾತಂತ್ರ್ಯ ಎಲ್ಲಿಯ ದೇಶವಿಭಜನೆ, ಎಲ್ಲಿಯ ರಾಮಾಯಣ ಆ ಕುರಿತು ``ವೈದೇಹಿ ವಾಚಿಕೆ"ಯ ಕೊನೆಯಲ್ಲಿರುವ ಸಂದರ್ಶನದಲ್ಲಿ ``ಕ್ರೌಂಚ ಪಕ್ಷಿಗಳು " ಕಥೆಗೆ ಸಂಬಂಧಿಸಿ ವೈದೇಹಿ ಹೇಳಿದ್ದಿಷ್ಟು:- ``... ಎಲ್ಲ ಸೇರಿ ಆದ ``ಕ್ರೌಂಚ ಪಕ್ಷಿಗಳು" ಹೀಗೆ ನಾ ಕಟ್ಟಿದ ರಾಮಾಯಣವೋ, ಆಧುನಿಕ ಅಯೋಧ್ಯಾ ಪ್ರಸಂಗಕ್ಕೆ ಕಥಾ ಪ್ರಕಾರದಲ್ಲಿ ಹೊಮ್ಮಿದ ನನ್ನ ಪ್ರತಿಕ್ರಿಯೆಯೋ.... ಪ್ರೀತಿಯ ಆ ಅಡುಗೆ ಭಟ್ರರನ್ನು ನೆನವ ನುಡಿಚಿತ್ರವೋ ಅಥವಾ ಇತ್ತೀಚಿಗೆ ನಮ್ಮೂರಲ್ಲಿ ನಡೆಯುತ್ತಿರುವ ಎದೆ ಒಡೆಯುವಂಥ ಅರ್ಥಹೀನ ಗಲಭೆಗಳ ಹಾಗೂ ಆತ್ಮಹತ್ಯೆಗಳ ಎದರು ತನ್ನಂತೆ ಒಂದಾಗಿ ಕೊಂದುಕೊಂಡ ಸ್ಮೃತಿಧಾರೆಗಳ....ಏನೆಂದು ಹೇಳಲಿ?" ವೈದೇಹಿಯರ ಈ ಉತ್ತರವು ಕಥೆಯೊಂದು ಕತೆಗಾರ/ಗಾರ್ತಿಯ ಮನದಲ್ಲಿ ಹುಟ್ಟಿ ಬೆಳೆದು ಅಕ್ಷರರೂಪ ಪಡೆಯುವ ಪ್ರಕ್ರಿಯೆಯನ್ನು ಸಹಾ ಸ್ಥೂಲವಾಗಿ ಬಿಡಿಸಿಡುತ್ತದೆ ಎನ್ನಬಹುದು.
ಈ ವಾಚಿಕೆಯಲ್ಲಿ ಅವರು ಬರೆದ ``ಅಕ್ಕು" ``ಶಕುಂತಳೆಯೊಂದಿಗೆ ಕಳೆದ ಅಪರಾಹ್ನ " `` ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು" ``ಅಮ್ಮಚ್ಟಿಯೆಂಬ ನೆನಪು" ಮೊದಲಾದ ಉತ್ತಮ ಕಥೆಗಳಿದ್ದರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದುಕೊಂಡ ಸಂಕಲನದ ಹೆಸರನ್ನು ಪಡೆದಿರುವ ``ಕ್ರೌಂಚ ಪಕ್ಷಿಗಳು" ಕಥೆಯು ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ಈ ಪುಸ್ತಕದಲ್ಲಿರುವ ಕವನಗಳು ಮತ್ತು ನಾಟಕ ಸಹ ಗಮನ ಸೆಳೆಯುವಂತಹವೇ. ಒಂದು ಪ್ರಬಂದವೂ ಸ್ತ್ರೀ ಪ್ರಪಂಚದ ಪುಳಕಗಳನ್ನು ಬಿಂಬಿಸುತ್ತದೆ. ಕೊನೆಯಲ್ಲಿರುವ ವಿಸ್ತೃತವಾದ ಸಂದರ್ಶನದಲ್ಲಿ ಲೇಖಕಿಯು ಹುಟ್ಟಿದ ಊರಿನಲ್ಲಿ ಪಡೆದುಕೊಂಡ ಅನುಭವ ಗಮನಿಸಿದ ಜನಜೀವನ ಹೇಗೆ ತನ್ನ ಕಥೆಗಳಿಗೆ ಜೀವ ತುಂಬಿತೆನ್ನುವುದನ್ನು ಸೂಚಿಸಿದ್ದಾರೆ. ನಮ್ಮ ನಾಡಿನ ಕುಂದಗನ್ನಡದ ಚಂದದ ಬಳಕೆಯನ್ನು ಅವರ ಕಥೆಗಳುದ್ದಕ್ಕೂ ಕಾಣಬಹುದು. ವೈದೇಹಿ ವಾಚಿಕೆ" ಪುಸ್ತಕವನ್ನೊದಿದ ಬಳಿಕ ಅವರ ಎಲ್ಲಾ ಕಥೆಗಳನ್ನು ಓದುವ ಆಸೆಯುಂಟಾಗುವುದು ಸಹಜ. ೬೭೦ ಪುಟಗಳ ``ಅಲೆಗಳಲ್ಲಿ ಅಂತರಂಗ" ಸಂಗ್ರಹವು (ಅಕ್ಷರ ಪ್ರಕಾಶನ ಸಾಗರ ಬೆಲೆ ೪೦೦/-) ಸಮಗ್ರ ವೈದೇಹಿ ಪ್ರಪಂಚದಲ್ಲಿ ಒಳ್ಳೆಯ ತಿರುಗಾಟವನ್ನು ನೀಡಬಲ್ಲದು.
``ವೈದೇಹಿ ವಾಚಿಕೆ" ಸಕಾಲದಲ್ಲಿ ಸಂಗ್ರಹಿಸಿ, ಓದುಗರಿಗೆ ನೀಡಿದ ಸಾಗರದ ಟಿ.ಪಿ. ಅಶೋಕರವರೂ ಅಭಿನಂದನಾರ್ಹರು.