Saturday, April 3, 2010


ಓ ಮಲ್ಲಿಗೆ,
ನೀ ಹೊರಟಿದ್ದು ಎಲ್ಲಿಗೆ
ಎಂದು ನಾ ಬಲ್ಲೆ
ಇಲ್ಲಲ್ಲ ಅಲ್ಲಿ
ತಾನೆ ನಿನ್ನ ಮನೆ?
ಪರಿಮಳ ಸೂಸು
ಸಂತಸದ ಸೋನೆ
ನಿನ್ನ ನೋಟ,ಮಾಟ

cat cat


ನಮ್ಮ ಮನೆಯ ಬೆಕ್ಕಿನ ಮರಿ
ಅದರ ಒಂದೊಂದು ಕಣ್ಣು ಒಂದೊಂದು ಬಣ್ಣ
ಬಾಯಿ ಕಳೆದರೆ ಮಿಂಯಾವ್ ಮಾತ್ರ!

Sunday, March 14, 2010

Vaidehi Vaachike

``ವೈದೇಹಿ ವಾಚಿಕೆ "

ನಮ್ಮ ಊರಿನ ವೈದೇಹಿಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ (೨೦೦೯)ಪ್ರಶಸ್ತಿ ಬಂದದ್ದು ಕುಂದಾಪುರದವರೆಲ್ಲರಿಗೆ ಖುಷಿ ತಂದಿದೆ. ಕುಂದಾಪುರ ಕನ್ನಡವನ್ನು ಬರಹದಲ್ಲಿ ಅವರೆಷ್ಟು ಚಂದವಾಗಿ, ಕಲಾತ್ಮಕವಾಗಿ ದುಡಿಸಿಕೊಂಡವರು ಬಹಳ ಅಪೂರ್ವ ಜನಸಮಾನ್ಯರ ಮಾತುಗಳನ್ನು ನಮ್ಮ ಭಾಷೆಯಲ್ಲಿ ಅದೆಷ್ಟು ನೈಜವಾಗಿ ಚಿತ್ರಿಸಿದ್ದಾರೆ. ಅವರಿಗೆ ಈ ಪ್ರಶಸ್ತಿ ಬಂದ ಕೂಡಲೇ ಎಂಬಂತೆ ``ವೈದೇಹಿ ವಾಚಿಕೆ" ಎಂಬ ಅವರ ಬರಹಗಳ ಪ್ರಾತಿನಿಧಿಕ ಅಯ್ಕೆಯ ಸಂಗ್ರಹ ಎನ್ನಬಹುದಾದ ಪುಟ ಪುಸ್ತಕ ಪ್ರಕಟವಾಗಿದೆ. (ವೈದೇಹಿ ವಾಚಿಕೆ ಸಂ:ಟಿ.ಪಿ. ಅಶೋಕ ಪುಟ:೧೪೪ ಬೆಲೆ ೧೦೦/- ಪ್ರ: ನುಡಿಪುಸ್ತಕ ಬೆಂಗಳೂರು ದೂರವಾಣಿ ೦೮೦-೨೬೭೧೧೩೨೯). ಈ ಸಂಗ್ರಹವನ್ನು ಪುಟ ಪುಸ್ತಕ ಎಂದು ಯಾಕೆ ಕರೆದೆನೆಂದರೆ ಅವರ ಬರಹದ ವ್ಯಾಪ್ತಿ ದೊಡ್ಡದು, ಅದನ್ನು ಪುಟ್ಯ ಸಂಗ್ರಹದಲ್ಲಿ ಹಿಡಿದಿಡುವುದು ಕಷ್ಟ-ಅಂಥ ಕಷ್ಟಕರ ಕೆಲಸವನ್ನು ವಿಮರ್ಶಕ ಶ್ರೀ ಟಿ.ಪಿ. ಅಶೋಕ ಮಾಡಿದ್ದಾರೆ.
ಕುಂದಾಪುರ ಪೇಟೆಯಲ್ಲಿ ಹುಟ್ಟಿ ಬೆಳೆದ ಜಾನಕಿಯವರು ವೈದೇಹಿಯಾಗಿ ಬೆಳೆದ ಪರಿ ಅದ್ಭುತ ಮತ್ತು ಅಭಿಮಾನ ಪುಟಿಸುವಂತಹದ್ದು, ತಾವು ನೋಡಿದ ಕತೆಯನ್ನು ತಾವು ಆಡಿದ ಕುಂದಾಪ್ರ ಕನ್ನಡವನ್ನು ಬಳಸಿಕೊಂಡು ಬರೆದದ್ದು ಒಂದು ಅಪರೂಪದ ಸಾಧನೆ. ``ವೈದೇಹಿ ವಾಚಿಕೆ"ಯ ಮುನ್ನೂಡಿಯಲ್ಲಿ ಟಿ.ಪಿ. ಅಶೋಕ ರವರು ಅವರ ಬರವಣಿಗೆಯ ಬೆಳವಣಿಗೆಯನ್ನು ಗುರುತಿಸಿದ್ದು, ಹೀಗೆ. ೧೯೭೯ ರಲ್ಲಿ ತಮ್ಮ ಮೊದಲ ಕಥಾ ಸಂಕಲನವನ್ನು ಪ್ರಕಟಿಸಿದ ವೈದೇಹಿ ಕಳೆದ ಮೂರು ದಶಕಗಳಲ್ಲಿ ಬೆಳೆದಿರುವ ಪರಿ ಓದು ಸಂತಸಭರಿತ ಅಚ್ಚರಿ. ಈ ಅವಧಿಯಲ್ಲಿ ಅವರ ಕಥನ ಕೌಶಲವು ಹೊಸ ಎತ್ತರಗಳಿಗೆ ಏರಿರುವಂತೆ ಅವರ ಲೋಕ ಗ್ರಹಿಕೆ ಮತ್ತು ಲೋಕ ದೃಷ್ಟಿಗಳೂ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಾ ಪ್ರಬುದ್ಧವಾಗುತ್ತ ಬಂದಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಅವರ ಸಾಹಿತ್ಯವು ಸಾಧಿಸಿ ಕೊಂಡಿರುವ ಪ್ರಕಾರ ವೈವಿಧ್ಯವು ಗಮನಾರ್ಹವಾಗಿದೆ. ಸಣ್ಣ ಕಥೆಯಿಂದ ಆರಂಭವಾಗಿ ಕಾವ್ಯ ಕಾಂದಬರಿ, ಪ್ರಬಂಧ, ನಾಡಕ ವಿವಿಧ ಪ್ರಕಾರಗಳಲ್ಲಿ ವಿಸ್ತರಿಸಿಕೊಂಡಿರುವ ಅವರ ಪ್ರಯೋಗಶೀಲತೆ ಮತ್ತು ಸಾಧನೆ ಎದ್ದು ಕಾಣುವಂತಿವೆ .... ಹಾಗೆಯೇ ಕೋಟ ಲಕ್ಷ್ಮೀ ನಾರಾಯಣ ಕಾರಂತ, ಸೇಡಿಯಾಪು ಕೃಷ್ಣ ಭಟ್ಟ, ಬಿ.ವಿ. ಕಾರಂತ, ಸರಸ್ವತಿ ಬಾಯಿ ರಾಜವಾಡೆ ಮುಂತಾದ ಗಣ್ಯರ ಆತ್ಮ ಚರಿತ್ರೆ ಅನುಭವ ಕಥನಗಳು...."
``ವೈದೇಹಿ ವಾಚಿಕೆ" ಸಂಗ್ರಹದಲ್ಲಿ ವೈದೇಹಿಯವರು ಬರೆದ ಸಣ್ಣ ಕಥೆಗಳು, ಕವನಗಳು, ನಾಟಕ, ಪ್ರಬಂಧ ಮತ್ತು ಕಾದಂಬರಿಯ ಆಯ್ದ ಭಾಗಗಳಿವೆ. ಅವರು ೧೯೯೨ ರಲ್ಲಿ ಬರೆದ ``ಅಸ್ಪ್ರಶ್ಯರು" ಕಾದಂಬರಿಯು ತನ್ನದೇ ರೀತಿಯಲ್ಲಿ ವಿಶಿಷ್ಟವಾಗಿದ್ದರೂ, ಯಾಕೋ ಇನ್ನೂ ಹೆಚ್ಚಿನ ಪ್ರಸಿದ್ದಿಯನ್ನು ಪಡೆಯಬೇಕಿತ್ತೇನೊ ಎಂದೆನಿಸುತ್ತದೆ. ಈ ವಾಚಿಕೆಯಲ್ಲಿರುವ ಆಯ್ದ ಭಾಗವು ಇತ್ತ ಕಥೆಯನ್ನು ಹೊಂದಿರುವಂತೆಯೇ ಅತ್ತ ಪ್ರಬಂಧದ ಗುಣವನ್ನು ಅಲ್ಲಲ್ಲಿ ಹೊಂದಿದೆ. ಬಾಣಂತಿಯರು ಆ ಕೆಲವು ದಿನಗಳಲ್ಲಿ ಅಸ್ಪ್ರಶ್ಯತೆಯನ್ನು ಅನುಭವಿಸುವುದು ಸಮಾಜವು ಹೇರಿದ ಆ ಅಸ್ಪ್ರಶ್ಯತೆಯಲ್ಲಿ ಮಹಿಳೆಯರು ಉಣ್ಣುವ ಅವಮಾನ ಇತ್ಯಾದಿಗಳ ಸೂಕ್ಷ್ಮ ಚಿತ್ರಣ ಅವುಗಳ ಮಧ್ಯೆ ಸಂಪ್ರದಾಯಸ್ಥ ಕುಟುಂಬವೊಂದರ ನೈಜ ಚಿತ್ರಣ ಸಹಜ ಸಂಭಾಷಣೆಯ ಮೂಲಕ ಕಥೆ ಮೂಡಿಬರುವ ಪರಿ ... ಅಪರೂಪದ್ದು. ಈ ಭಾಗದಲ್ಲಿ ಮಕ್ಕಳ ಲೋಕವೂ ಚಿತ್ರಣಗೊಂಡಿರುವುದರಿಂದ, ಲಲಿತ ಪ್ರಬಂಧದ ಛಾಯೆಯೂ ಅಲ್ಲಲ್ಲಿ ಇಣುಕುತ್ತಿದೆ. ಈ ಪ್ರಪಂಚದಲ್ಲಿ ಅಮಾವಾಸ್ಯೆಯ ದಿನ ಎಣ್ಣೆ ಕೇಳಲು ಬರುವ ನರಪಟೆಯು ಇನ್ನೊಂದು ಅಸ್ಪ್ರಶ್ಯ ಲೋಕದ ದರ್ಶನ ಮಾಡಿಸುತ್ತಾಳೆ. ``ಕೈಯಲ್ಲೊಂದು ಬಿದಿರಿನ ಬುಟ್ಟಿ ತಲೆಯ ಮೇಲೆ ಪಾಳೆಯ ಟೊಪ್ಪಿ ಸೊಂಟದಲ್ಲಿ ಐದೋ ಆರೋ ಕುಕ್ಕೆ ಅಥವಾ ಹೆಡಿಗೆ ಅತವಾ ಸಿಬ್ಬಲ. ಇಂತಿಷ್ಟು ಅಕ್ಕಿಗೆಂದೋ, ಚಕ್ಕರಕ್ಕೆಂದೋ (ನಾಲ್ಕಾಣೆ) ವ್ಯಾಪಾರ ಕುದುರುವುದುಂಟು. ಕೊಂಡಾದ ಮೇಲೆ ಚಂದು ಬಾವಿಯಿಂದ ನೀರೆತ್ತಿ ಅವುಗಳ ಮೇಲೆ ಹೊಯ್ದು ಶುದ್ದ ಮಾಡಿ ಒಳಗೆ ತಂದಿಡುತ್ತಾಳೆ. ಅಷ್ಟರವರೆಗೆ ಅವುಗಳನ್ನು ಮುಟ್ಟುವಂತಿಲ್ಲ..... ನರಪಟೆ ಬಂದರೆ ಒಂದು ಗೆರೆಟೆಯಲ್ಲಿ ಒಂದಿಷ್ಟು ಎಣ್ಣೆ ಸುರಿದು ಎಲ್ಲರ ತಲೆಗೆ ಸುಳಿದು ಹೆಚ್ಚು ಗ್ರಹಚಾರ ಇದ್ದವರನ್ನು ಕರೆದು ಅದರಲ್ಲಿ ತಮ್ಮ ಬಿಂಬ ನೋಡಲು ಹೇಳಿ ಅದನ್ನು ಅವಳಿಗೆ ಕೊಟ್ಟರಾಯಿತು. ಗ್ರಹಚಾರ ಓಡಿದಂತೆಯೇ...."
ಮನುಷ್ಯ ಕುಲದ ಎಲ್ಲಾ ಹೆಂಗೆಳೆಯರ ಬಿಕ್ಕಟ್ಟು, ದುಮ್ಮಾನ , ಅಪಮಾನ, ಬೇನೆ, ನೋವು, ಕಷ್ಟಗಳನ್ನು ವೈದೇಹಿಯವರು ತಮ್ಮ ಕಥೆಗಳಲ್ಲಿ ಹಿಡಿಯಲು ಯತ್ನಿಸುತ್ತಾರೇನೋ ಎಂದು ಒಮ್ಮೊಮ್ಮೆ ಅನಿಸುತ್ತದೆ. ಹೆಸರನ್ನು ಕೇಳಿದರೆ ರಾಮಾಯಣದ ನೆನಪಾಗುವ ``ಕ್ರೌಂಚ ಪಕ್ಷಿಗಳು " ಕಥೆಯಲ್ಲಿ ದೇಶ ವಿಭಜನೆಯ ಹಿನ್ನಲೆಯಲ್ಲಿ ದೌರ್ಜನ್ಯಕ್ಕೊಳಗಾಗುವ ಹೆಂಗಸೊಬ್ಬಳ ಚಿತ್ರಣವಿದೆ. ಗಲಭೆಯ ಸಮಯದಲ್ಲಿ ಗಂಡನೆದರೇ ಅಪಹರಣಕ್ಕೆ ಒಳಗಾಗುವ ಆಕೆ, ನಂತರ ಪುನರ್ವಸತಿ ಕೇಂದ್ರದಲ್ಲಿ ಗಂಡನ ಕಣ್ಣಿಗೆ ಬಿದ್ದರೂ, ಗಂಡ ಮಾತ್ರ ``.... ಮೈ ಮೇಲಿನ ಬೈರಾಸ್‌ನ್ನು ತಲೆಯ ಮೇಲೆ ಹಾಕಿಕೊಂಡು, ತಲೆಯಡಿ ಮಾಡಿಕೊಂಡು ಕರ್ಮಾಂತರಕ್ಕೆ ಹೊರಟವರ ಹಾಗೆ ವಾಪಸು ಹೋಗುತ್ತಾನೆ. ಈ ಹೆಂಗಸು ತನಗೆ ಗುರುತೇ ಇಲ್ಲ ಎಂದರಂತೆ ...!"
ಆ ಮಹಿಳೆಯ ಮಾತಿನಲ್ಲಿ ಹೊರಬರುವ ಈ ಸತ್ಯವು ರಾಮಾಯಣದ ಸೀತೆಯ ಪಾಡನ್ನು ನೆನಪಿಸುವ ಮೂಲಕ, ಕಥೆಗೆ ಹೊಸ ಆಯಾಮವನ್ನು ನೀಡುತ್ತದೆ. ಎಲ್ಲಿಯ ಸ್ವಾತಂತ್ರ್ಯ ಎಲ್ಲಿಯ ದೇಶವಿಭಜನೆ, ಎಲ್ಲಿಯ ರಾಮಾಯಣ ಆ ಕುರಿತು ``ವೈದೇಹಿ ವಾಚಿಕೆ"ಯ ಕೊನೆಯಲ್ಲಿರುವ ಸಂದರ್ಶನದಲ್ಲಿ ``ಕ್ರೌಂಚ ಪಕ್ಷಿಗಳು " ಕಥೆಗೆ ಸಂಬಂಧಿಸಿ ವೈದೇಹಿ ಹೇಳಿದ್ದಿಷ್ಟು:- ``... ಎಲ್ಲ ಸೇರಿ ಆದ ``ಕ್ರೌಂಚ ಪಕ್ಷಿಗಳು" ಹೀಗೆ ನಾ ಕಟ್ಟಿದ ರಾಮಾಯಣವೋ, ಆಧುನಿಕ ಅಯೋಧ್ಯಾ ಪ್ರಸಂಗಕ್ಕೆ ಕಥಾ ಪ್ರಕಾರದಲ್ಲಿ ಹೊಮ್ಮಿದ ನನ್ನ ಪ್ರತಿಕ್ರಿಯೆಯೋ.... ಪ್ರೀತಿಯ ಆ ಅಡುಗೆ ಭಟ್ರರನ್ನು ನೆನವ ನುಡಿಚಿತ್ರವೋ ಅಥವಾ ಇತ್ತೀಚಿಗೆ ನಮ್ಮೂರಲ್ಲಿ ನಡೆಯುತ್ತಿರುವ ಎದೆ ಒಡೆಯುವಂಥ ಅರ್ಥಹೀನ ಗಲಭೆಗಳ ಹಾಗೂ ಆತ್ಮಹತ್ಯೆಗಳ ಎದರು ತನ್ನಂತೆ ಒಂದಾಗಿ ಕೊಂದುಕೊಂಡ ಸ್ಮೃತಿಧಾರೆಗಳ....ಏನೆಂದು ಹೇಳಲಿ?" ವೈದೇಹಿಯರ ಈ ಉತ್ತರವು ಕಥೆಯೊಂದು ಕತೆಗಾರ/ಗಾರ್ತಿಯ ಮನದಲ್ಲಿ ಹುಟ್ಟಿ ಬೆಳೆದು ಅಕ್ಷರರೂಪ ಪಡೆಯುವ ಪ್ರಕ್ರಿಯೆಯನ್ನು ಸಹಾ ಸ್ಥೂಲವಾಗಿ ಬಿಡಿಸಿಡುತ್ತದೆ ಎನ್ನಬಹುದು.
ಈ ವಾಚಿಕೆಯಲ್ಲಿ ಅವರು ಬರೆದ ``ಅಕ್ಕು" ``ಶಕುಂತಳೆಯೊಂದಿಗೆ ಕಳೆದ ಅಪರಾಹ್ನ " `` ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು" ``ಅಮ್ಮಚ್ಟಿಯೆಂಬ ನೆನಪು" ಮೊದಲಾದ ಉತ್ತಮ ಕಥೆಗಳಿದ್ದರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದುಕೊಂಡ ಸಂಕಲನದ ಹೆಸರನ್ನು ಪಡೆದಿರುವ ``ಕ್ರೌಂಚ ಪಕ್ಷಿಗಳು" ಕಥೆಯು ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ಈ ಪುಸ್ತಕದಲ್ಲಿರುವ ಕವನಗಳು ಮತ್ತು ನಾಟಕ ಸಹ ಗಮನ ಸೆಳೆಯುವಂತಹವೇ. ಒಂದು ಪ್ರಬಂದವೂ ಸ್ತ್ರೀ ಪ್ರಪಂಚದ ಪುಳಕಗಳನ್ನು ಬಿಂಬಿಸುತ್ತದೆ. ಕೊನೆಯಲ್ಲಿರುವ ವಿಸ್ತೃತವಾದ ಸಂದರ್ಶನದಲ್ಲಿ ಲೇಖಕಿಯು ಹುಟ್ಟಿದ ಊರಿನಲ್ಲಿ ಪಡೆದುಕೊಂಡ ಅನುಭವ ಗಮನಿಸಿದ ಜನಜೀವನ ಹೇಗೆ ತನ್ನ ಕಥೆಗಳಿಗೆ ಜೀವ ತುಂಬಿತೆನ್ನುವುದನ್ನು ಸೂಚಿಸಿದ್ದಾರೆ. ನಮ್ಮ ನಾಡಿನ ಕುಂದಗನ್ನಡದ ಚಂದದ ಬಳಕೆಯನ್ನು ಅವರ ಕಥೆಗಳುದ್ದಕ್ಕೂ ಕಾಣಬಹುದು. ವೈದೇಹಿ ವಾಚಿಕೆ" ಪುಸ್ತಕವನ್ನೊದಿದ ಬಳಿಕ ಅವರ ಎಲ್ಲಾ ಕಥೆಗಳನ್ನು ಓದುವ ಆಸೆಯುಂಟಾಗುವುದು ಸಹಜ. ೬೭೦ ಪುಟಗಳ ``ಅಲೆಗಳಲ್ಲಿ ಅಂತರಂಗ" ಸಂಗ್ರಹವು (ಅಕ್ಷರ ಪ್ರಕಾಶನ ಸಾಗರ ಬೆಲೆ ೪೦೦/-) ಸಮಗ್ರ ವೈದೇಹಿ ಪ್ರಪಂಚದಲ್ಲಿ ಒಳ್ಳೆಯ ತಿರುಗಾಟವನ್ನು ನೀಡಬಲ್ಲದು.
``ವೈದೇಹಿ ವಾಚಿಕೆ" ಸಕಾಲದಲ್ಲಿ ಸಂಗ್ರಹಿಸಿ, ಓದುಗರಿಗೆ ನೀಡಿದ ಸಾಗರದ ಟಿ.ಪಿ. ಅಶೋಕರವರೂ ಅಭಿನಂದನಾರ್ಹರು.

Thursday, July 23, 2009

Mara Kesuvina Chatti

ಮರ ಕೆಸುವಿನ ಚಟ್ಟಿ
`` ಮಕ್ಕಳೇ, ಚಿನ್ನಮ್ಮತ್ತೆ ಬಂದಿರ್; ಇವತ್ ಮರಕೆಸದ ಚಟ್ಟಿ ಮಾಡುವ, ಆಗ್ದಾ " ಎನ್ನುತ್ತಾ ಅಮ್ಮಮ್ಮ, ದೇವಸ್ಥಾನ ದ ಗುಡ್ಡೆಗೆ ಹೊರಟ ರು . ನಾವು ಮಕ್ಕಳು ಸಹ ಅವರ ಹಿಂದೆ ಯೇ ಹೊರಟೆವು. ಮಳೆಗಾಲ ಶುರುವಾಗಿ, ಮಧ್ಯೆ ಕೆಲವು ದಿನ ``ಹೊಳ" ಆಗಿದ್ದರಿಂದ, ಓಡಾಟ ಸುಲಭ. ಆಗ ದೇವಸ್ಥಾನದ ದಾರಿಯುದ್ದಕ್ಕೂ ದೊಡ್ಡ ಹಾಡಿಯಿದ್ದು, ಅವುಗಳಲ್ಲಿ ಕೆಲವು ಭಾರೀ ಹಳೆಯ ಮರಗಳಿದ್ದವು. ಕೆಲವು ಮರಗಳ ತೊಗಟೆ ಎಲ್ಲಾ ಒಣಗಿ, ಒಣಗಿ, ಒಚ್ಚಿಕೊಂಡು ಬರುವಂತಾಗಿತ್ತು, ಅಂಥಹ ಹಳೆಯ ಮರಗಳೆಂದರೆ, ಮರಕೆಸ, ಮರಬಾಳೆ ಮೊದಲಾದ ಅಪ್ಪಿ ಬೆಳೆಯುವ ಗಿಡಗಳಿಗೆ ತುಂಬಾ ಪ್ರೀತಿ. ಹಳೆ ಮರದ ಕಾಂಡದ ಮೇಲೆ, ನೆಲದಿಂದ ಸುಮಾರು ೧೦ -೨೦ ಅಡಿ ಎತ್ತರದಲ್ಲಿ ಮರಕೆಸಗಳು ಎಲೆಗಳನ್ನು ಹರಡಿ ಬೆಳೆದಿರುವುದು ಸಾಮಾನ್ಯ ದೃಶ್ಯ. ಕೆಲವು ಕಡೆ ಕೈಗೇ ಸಿಗುವಂತೆ ಬೆಳೆಸಿರುತ್ತಿದ್ದ ಮರಕೆಸದ ಕೆಲವು ಎಲೆಗಳನ್ನು ಸಂಗ್ರಹಿಸಿ, ಮನೆಗೆ ವಾಪಸಾದೆವು. ಗದ್ದೆ ಬದಿ ಬೆಳೆಯುವ ಕಾಡು ಕೆಸದ ಎಲೆಯಗಾತ್ರವೇ ಇದ್ದರೂ, ಸ್ವಲ್ಪ ದಪ್ಪ ಎಲೆ, ಸ್ವಲ್ಪ ಹಳದಿ ಬಣ್ಣಕ್ಕಿರುತ್ತಿದ್ದ ಮರಕೆಸದ ಎಲೆಗಳು ರುಚಿ ಜಾಸ್ತಿ ಅಂತೆ.
ಮರಕೆಸದ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ, ಮೊದಲೇ ಅರೆದಿಟ್ಟುಕೊಂಡಿದ್ದ ಅಕ್ಕಿ ಹಿಟ್ಟಿನ ಜೊತೆ ಹಾಕಿ ಕಲಸಿ, ದೋಸೆ ಕಲ್ಲಿನ ಮೇಲೆ ಅದನ್ನು ಹಚ್ಚಿ, ಬೇಯಿಸಿದಾಗ ತಯಾರಾಗುವುದು ಮರಕೆಸದ ಎಲೆಯ ದೋಸೆ ಅಥವಾ ಚಟ್ಟಿ. ದೋಸೆ ಕಲ್ಲಿನ ಮೇಲೆ ಬೇಯುವಾಗ, ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿದರೆ, ರುಚಿ ಜಾಸ್ತಿ. ಮಳೆಗಾಲದ ಬೇಸರದ ದಿನಗಳಲ್ಲಿ, ದಿನಾ ಗಂಜಿ, ಅನ್ನ ತಿಂದು ಬಾಯಿ ರುಚಿ ಕೆಟ್ಟಾಗ, ಅಮ್ಮಮ್ಮ ಮಾಡುತ್ತಿದ್ದ ಹಳೆಕಾಲದ ತಿಂಡಿಗಳಲ್ಲಿ ಮರಕೆಸದ ಚಟ್ಟಿಯೂ ಒಂದು. ಮರಕೆಸು ವಿನ ವಿಶೇಷತೆ ಎಂದರೆ, ರುಚಿಕರವಾಗಿ ಇರುವುದಲ್ಲದೆ, ಬಾಯಿ ತುರಿಕೆ ಬರುವುದಿಲ್ಲ, ಇದೇ ರೀತಿಯ ಚಟ್ಟಿಯನ್ನು ಗೋಯೆಕೆಸಾದ ಎಲೆಯಿಂದಲೂ ಮಾಡಬಹುದು.
ಮಳೆಗಾಲದಲ್ಲಿ ತಯಾ ರಾಗುತ್ತಿರುವ ಮತ್ತೊಂದು ಜನಪ್ರಿಯ ತಿಂಡಿ ಎಂದರೆ ಪತ್ರೊಡೆ. ದೊಡ್ಡ ಕೆಸುವಿನ ಎಲೆಯಿಂದ ಮಾಡುವ ಈ ಪತ್ರೊಡೆ ಎಷ್ಟು ಜನಪ್ರಿಯ ವೆಂದರೆ, ಪತ್ರೊಡೆಗಳಲ್ಲಿ ಹಲವಾರು ತೆರದ ವೈವಿಧ್ಯ ಗಳು, ಬೇಯಿಸುವ ಕ್ರಮ, ಹೆಚ್ಚುವ ಕ್ರಮ, ಇಡೀ ಎಲೆ, ಕತ್ತರಿಸಿದ ಎಲೆ, ಈ ರೀತಿ ನಾನಾ ರುಚಿಯ ಪತ್ರೊಡೆಗಳು ಚಾಲ್ತಿಯಲ್ಲಿವೆ. ಪತ್ರೊಡೆಯ ಜೊತೆ ಕೊಬ್ಬರಿ ಎಣ್ಣೆ ಸೇರಿಸಿ ತಿನ್ನುವ ರುಚಿಯು, ಆಸಾಡಿ ತಿಂಗಳ ಜಿರಾಪತಿ ಮಳೆಯೊಡನೆ ನೆನಪಾಗಲೇಬೇಕು.
ಮಳೆಗಾಲವೆಂದರೆ, ಹಿಂದೆ ಹಳ್ಳಿಗಳಲ್ಲಿ ತರಕಾರಿಗಳೇ ದುರ್ಲಭ. ಎರಡು ಮೂರು ತಿಂಗಳು ಎಡೆಬಿಡದೆ ಆಗ ಸುರಿಯುತ್ತಿದ್ದ ಮಳೆಯಿಂದಾಗಿ, ಮನೆ ಸುತ್ತ ಯಾವುದೇ ತರಕಾರಿ ಅಥವಾ ಸೊಪ್ಪು ಬೆಳೆಯುತ್ತಿರಲಿಲ್ಲ. ನಮ್ಮ ಮನೆಯ ಅಂಗಳದಲ್ಲಿ, ಮಳೆ ಶುರುವಾಗುವ ಸಮಯಕ್ಕೆ ಸರಿಯಾಗಿ, ಉದ್ಕಕ್ಕೂ ಎರಡು ಸಾಲು ತರಕಾರಿ ಬೆಳೆಯುವ ವ್ಯವಸ್ಥೆ ಮಾಡುತ್ತಿದ್ದರು. ಆ ಎರಡು ಸಾಲು ಫಲಭರಿತ ಮಣ್ಣಿನಲ್ಲಿ ಬೆಂಡೆ, ಅಲಸಂಡೆಯ ಬೀಜಗಳನ್ನು ಹಾಕುತ್ತಿದ್ದರು. ಒಂದೆರಡು ತಿಂಗಳಲ್ಲಿ ಸಾಮಾನ್ಯವಾಗಿ ಬೆಂಡೆಗಿಡಗಳು ಕಾಯಿ ಬಿಡುತ್ತಿದ್ದವು. ಮನೆ ಮುಂದಿನ ಈ ಪುಟ್ಟ ತರಕಾರಿ ತೋಟದಲ್ಲಿ ಬೆಂಡೆಕಾಯಿ ಬಿಡಲು ತೊಡಗಿದರೆ, ಒಂದೆರಡು ತಿಂಗಳು ತರಕಾರಿಗಳ ಬರವಿಲ್ಲ. ಚೆನ್ನಾಗಿ ಆದರೆ ಪ್ರತಿ ಎರಡು ದಿನಕ್ಕೊಮ್ಮೆ ಒಂದು ಅಡುಗೆಗಾಗುವಷ್ಟು ಎಳೆ ಬೆಂಡೆಕಾಯಿ ಬಿಡುತ್ತಿತ್ತು. ಆಗ ತಾನೆ ಕುಯ್ದು ತಂದ ಬೆಂಡೆ ಕಾಯಿಯ ಹುಳಿಯ ರುಚಿಯು ಮಳೆಗಾಲದ ನೆನಪುಗಳಲ್ಲಿ ಸೇರಿ ಹೋಗಿದೆ. ಈ ಬೆಂಡೆಗಿಡಗಳ ಮಧ್ಯೆ, ಒಂದೆರಡು ಹೀರೆಕಾಯಿ ಗಿಡಗಳಲ್ಲಿ ಹಬ್ಬಿಕೊಂಡಿ ರುವುದುಂಟು. ನಾಲ್ಕಾರು ವಾರ ಕಳೆದು, ಹೀರೆಕಾಯಿ ಬಿಡತೊಡಗಿದರೆ, ದಿನಾ ನಾಲ್ಕಾರು ಕಾಯಿ ಲಭ್ಯ. ಆದರೆ, ಅದೇಕೋ, ಒಂದೊಂದು ವರ್ಷ ಬೆಂಡೆ, ಹೀರೆಗಳು ಗಿಡವಾಗಿ ಬೆಳೆದರೂ, ಕಾಯಿ ಬಿಡದೇ ಸತಾಯಿಸುವುದುಂಟು. ಪೂರ್ತಿ ಎರಡು ತಿಂಗಳಲ್ಲಿ ನಾಲ್ಕಾರು ಕಾಯಿ ಬಿಟ್ಟು, ನಂತರ ನಿರಾಶೆಗೊಳಿಸುವ ಅಂತಹ ವರ್ಷಗಳಲ್ಲಿ, ಬೇರೆ ತರಕಾರಿಗಳನ್ನು ಹುಡುಕುವುದು ಅನಿವಾರ್ಯ.
ಕಾಟು ಕೆಸದ ಎಲೆಯ ಚಟ್ನಿ , ಕಾಟುಕೆಸದ ಗೆಡ್ಡೆಯ ಹುಳಿ ಮರಸಣಿಗೆ ಪಲ್ಯ ಈ ರೀತಿಯ ಪದಾರ್ಥಗಳು ತಯಾರಾದರೂ, ಇವುಗಳನ್ನು ತಿಂದರೆ ಮಕ್ಕಳ ಬಾಯಿಗೆ ತುರಿಕೆ ಖಚಿತ. ಒಮ್ಮೊಮ್ಮೆ ಬಾಳೆ ದಿಂಡಿನ ಪಲ್ಯ ಮಾಡುವುದುಂಟು - ``ಮಕ್ಕಳೇ, ಬಾಳೆದಿಂಡಿನ ಪಲ್ಯ ಭಾರೀ ಒಳ್ಳೆದು. ವರ್ಷಕ್ಕೆ ಒಂದು ದಿನವಾದ್ರೂ ಬಾಳೆ ದಿಂಡಿನ ಪಲ್ಯ ತಿನ್ಕಂಬ್ರು - ಹೊಟ್ಟೆಲ್ಲಿ ಸೇರುವ ಕೂದಲನ್ನು ಕರಗಿಸುವ ಶಕ್ತಿ ಇದಕ್ಕೆ ಉಂಟು " ಎನ್ನುತ್ತಿದ್ದ ಅಮ್ಮಮ್ಮನ ಲೋಕeನ ಅವರ ಹಿಂದಿನವರಿಂದ ಬಂದ ಬಳುವಳಿಯೇ ಸರಿ. ಬಾಳೆದಿಂಡನ್ನು ಬೆಂಗಳೂರಿನ ಅಂಗಡಿಯಲ್ಲಿ ಈಗಲೂ ಮಾರುವುದು ಅದರ ವೈದ್ಯಕೀಯ ಗುಣದ ಅರಿವಿನಿಂದಾಗಿಯೇ ಇರಬಹುದು.
ತೀರ ಅವಸರದಲ್ಲಿ ಮಳೆಗಾಲದಲ್ಲಿ ತಯಾರಾಗುವ ರುಚಿಕರನಾದ ಸಾರು ಎಂದರೆ ಮುರಿನ ಓಡಿನ ಸಾರು. ಬೇಸಗೆಯ ದಿನಗಳಲ್ಲಿ ಮುರಿನ ಹಣ್ಣನ್ನು (ಪುನರ್ಪುಳಿ) ಮನೆ ಹಿಂದಿನ ಕಾಡಿನಿಂದ ಆರಿಸಿ ತಂದು, ಒಳಗಿನ ತೊಳೆ ಬಿಡಿಸಿ, ಹೊರಗಿನ ಓಡನ್ನು ಮಾತ್ರ ಒಣಗಿಸಿಟ್ಟರೆ, ಮಳೆಗಾಲಕ್ಕೆ ಉಪಯೋಗಕ್ಕೆ ಬರುತ್ತದೆ. ಮುರಿನ ಓಡಿನ ನೀರು ನೀರಾದ ಸಾರು ಪಿತ್ತಕ್ಕೆ ಒಳ್ಳೆಯದಂತೆ! ಈಗಲೂ ಬೆಂಗಳೂರು ಮತ್ತು ಮುಂಬಯಿಯಂತಹ ಮಹಾನಗರಗಳಲ್ಲಿ ಒಣಗಿಸಿದ ಮುರಿನ ಓಡಿನ ಪ್ಯಾಕೆಟ್ಟುಗಳಿಗೆ ಬೇಡಿಕೆ ಇದೆ ಎಂದರೆ, ಈ ಮಾಮೂಲಿ ಹಣ್ಣಿನ ಅಮೂಲ್ಯ ಗುಣ ಮನವರಿಕೆ ಆದೀತು. ಮೊನ್ನೆ ಬೆಂಗಳೂರಿನ ಅವೆನ್ಯೂ ರೋಡಿನಲ್ಲಿ ಗಾಡಿಯಲ್ಲಿಟ್ಟು ಕಳಿತ ಮುರಿನ ಹಣ್ಣನ್ನು ಮಾರುತ್ತಿದ್ದರು - ಬೆಲೆ ಎಷ್ಟು ಎಂದು ಕೇಳಿದೆ - `` ಒಂದು ಕೆ.ಜಿ.ಗೆ ೧೪೦ ರೂಪಾ ! " ಅಬ್ಬಾ, ಮುರಿನ ಹಣ್ಣೇ !
ಬೇಸಗೆಯಲ್ಲಿ ಮಾಡಿಟ್ಟ ಮಾವಿನ ಹಣ್ಣಿನ ಹಣ್ ಚೆಟ್ಟಿನಿಂದ ತಯಾರಿಸುವ ಗೊಜ್ಜು ಮಳೆಗಾಲದ ನಾಲಗೆಗೆ ರುಚಿಕರ. ಹುಳಿ - ಸಿಹಿ ರುಚಿಯ ಮಾವಿನ ರಸದ ಮುದ್ದೆಯಾದ ಹಣ್ ಚೆಟ್‌ನ್ನು ಕತ್ತರಿಸಿ, ಅರೆದು ತಯಾರಿಸುವ ಗೊಜ್ಜು ರುಚಿಗೆ ಮಾತ್ರ ಪರವಾಗಿಲ್ಲ ; ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುತ್ತಿದ್ದರು ಅಮ್ಮಮ್ಮ . ಜಡಿಮಳೆಯಲ್ಲಿ ತಯಾರಾಗುತ್ತಿದ್ದ ಹಲಸಿನ ತೊಳೆಯ ಪಲ್ಯವೂ ಈಗ ಅಪರೂಪದ್ದಾಗಿದೆ. ಬೇಸಿಗೆಯಲ್ಲಿ ಸಿಗುವ ಹಲಸಿನ ತೊಳೆಗಳನ್ನು ಬಿಡಿಸಿ, ದೊಡ್ಡ ಜಾಡಿಗೆ ತುಂಬಿಸು ತ್ತಾರೆ. ಆ ಜಾಡಿಯ ತುಂಬಾ ಉಪ್ಪು ನೀರು - ಈ ರೀತಿ ಉಪ್ಪು ನೀರಿನಲ್ಲಿ ನೆನೆಸಿದ ಹಲಸಿನ ಸೊಳೆಗಳು ಎರಡು ತಿಂಗಳುಗಳಾಗುವಾಗ ಗಟ್ಟಿಯಾಗಿ, ಒಗರು ಒಗರಾಗಿ ಇರುತ್ತದೆ! ಅದನ್ನು ಕತ್ತರಿಸಿ ಪಲ್ಯ ಮಾಡಿ, `` ತಿನ್ನಿ ಮಕ್ಕಳೇ " ಎಂದು ಬಡಿಸಿದಾಗ, ನಮಗ್ಯಾರಿಗೂ ಅದನ್ನು ತಿನ್ನಲು ಸೇರುತ್ತಿರಲಿಲ್ಲ. ನೀರಿನಲ್ಲಿ ನೆನದ ಆ ಸೊಳೆಗಳು ಒಂದು ರೀತಿಯ ವಾಸನೆ ಮತ್ತು ಒಗರು ರುಚಿ ಪಡೆದಿರುತ್ತಿದ್ದುದರಿಂದ, ಆ ದಿನ ಬರೀ ಉಪ್ಪಿನಕಾ ರಸದಲ್ಲೇ ಊಟ ಮುಗಿಸುತ್ತಿದ್ದೆವು! ಇವೆಲ್ಲಾ ತಿನಿಸುಗಳ ನಡುವೆಯೂ, ಮಳೆಗಾಲದಲ್ಲಿ ಊಟಕ್ಕೆ ಉತ್ತಮವೆಂದರೆ ಮಿಡಿ ಉಪ್ಪಿನ ಕಾ. ಒಳ್ಳೆಯ ಜೀರಿಗೆ ಮಾವಿನ ಮಿಡಿಯ ಉಪ್ಪಿನ ಕಾಯಿ ರಸ ದೊರೆತರೆ, ಊಟಕ್ಕೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.
ಮಳೆಗಾಲದ ಅಪರೂಪದ ಅಡುಗೆಗಳ ಕುರಿತು ಇಷ್ಟು ಬರೆದ ನಂತರ, ಒಂದು ಕೊರತೆ ಕೆಲವರಿಗೆ ಕಂಡರೂ ಕಾಣಬಹುದು - ಅದೆಂದರೆ, ಮಳೆ ಸುರಿದ ನಂತರ, ಆ ಜೀವಜಲದಲ್ಲಿ ಉದಯಿಸುವ ಹಲವಾರು ಜೀವಿಗಳ ಅಡುಗೆ ಕೂಡ ಮಳೆಗಾಲದ ವಿಶೇಷವಲ್ಲವೇ? ಹೊಸ ನೀರಿಗೆ ಬರುವ ವಿನು , ಮಳೆಬಿದ್ದ ನಂತರ ಕೆಲವರು ಸಂಗ್ರಹಿಸುವ ಜಾಗಟೆ, ಮತ್ತಿತರ ಜಲಚರಗಳು, ಮಳೆ ಬಿದ್ದಾಗ ಗುಡ್ಡೆ ತುಂಬಾ ಎದ್ದೇಳುವ ಅಣಬೆಗಳು ಇವೆಲ್ಲವನ್ನೂ ಅಡುಗೆಗೆ ಬಳಸುವರು ನಿಜ; ಆ ಕುರಿತು ಸ್ವಾನುಭವ ಇಲ್ಲದ್ದರಿಂದ , ಅಷ್ಟರ ಮಟ್ಟಗಿನ ಕೊರತೆ ಈ ಲೇಖನದಲ್ಲುಂಟು; ಅಂಥ ಅಡುಗೆಗೂ ಅದರದ್ದೇ ಆದ ಗೌರವಯುತ ಸ್ಥಾನವು ನಮ್ಮ ಜನಪದರಲ್ಲಿ ಇರುವುದರಿಂದಾಗಿ, ಅಂಥ ವಿಚಾರಗಳ ಅರಿವಿರುವವರ ನೆರವಿನಿಂದ ಬರೆದಾಗ ಮಾತ್ರ, ಸೂಕ್ತ ಚಿತ್ರಣವನ್ನು ನೀಡಲು ಸಾಧ್ಯ.
ಎಂ. ಶಶಿಧರ ಹೆಬ್ಬಾರ್ ಹಾಲಾಡಿ

Wednesday, May 27, 2009

Gove beeja : Godambi

ಗೋಯ್ ಬೀಜ
ಬಿಸಿಲುಗಾಲದ ಬೆಳದಿಂಗಳ ರಾತ್ರಿ; ಹಗಲಿಡೀ ಬಿಸಿಲಿನ ಬೇಗೆಗೆ ಬಸವಳಿದ ದೇಹ, ರಾತ್ರಿಯ ಬೆಳದಿಂಗಳ ಸ್ನಿಗ್ದ ವಾತಾವರಣವನ್ನು ಸುಖಿಸುತ್ತಿತ್ತು. ತಿಂಗಳ ಬೆಳಕಿನಲ್ಲಿ ತಂಗಾಳಿ ಬೀಸುತ್ತಿದ್ದಾಗ, ನಾವೆಲ್ಲ ತಟ್ಟವಟ್ಟು ಜೋಯಿಸರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದೆವು. ಆ ದಿನ ರಾಮನವಮಿಯ `ವಸಂತ' ಅಂದರೆ ಫಲಹಾರ! ಪೂಜೆ ಮುಗಿದ ನಂತರ ಖಾದ್ಯ ತಿನ್ನಲು ಕುಳಿತೆವು - ಪಾನಕ ಮತ್ತು ಅಂದಿನ ವಿವಿಧ ಬಗೆಯ ರುಚಿಕರ ಖಾದ್ಯ ತಿನ್ನಲು. ಕೋಸಂಬರಿ, ಕಡಲೆಕಾಳಿನ ಕೋಸುಂಬರಿ, ಹಲಸಿನ ಸೊಳೆ, ಮೊದಲಾದ ತಿನಿಸುಗಳ ಜೊತೆ ಗೋಡಂಬಿ ಸಿಹಿ ಪಲ್ಯವನ್ನು ಬಡಿಸಿದ್ದರು. ಎಳೆಗೋಡಂಬಿಯನ್ನು ಬೆಲ್ಲ ಮತ್ತು ಕಾಯಿತುರಿಯ ಜೊತೆ ಸೇರಿಸಿದರೆ, ರುಚಿಯಾದ ತಿನಿಸು ಸಿದ್ಧ.
ಗೋವೆ ಬೀಜದ ಮೂಲವು ಪರದೇಶದಲ್ಲಿದೆ. ಗೋವಾಕ್ಕೆ ಬಂದ ಪೋರ್ಚುಗೀಸರ ಮೂಲಕ ಅದು ನಮ್ಮ ದೇಶವನ್ನು ಪ್ರವೇಶಿಸಿತು ಎಂದು ಸಸ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ. ಅದು ಯಾವ ದೇಶದ್ದಾದರೇನು, ಅದರ ರುಚಿಗೆ ನಾವೆಲ್ಲ ಮಾರು ಹೋಗಿ ಅದನ್ನು ನಮ್ಮ ಆಪ್ತ ತಿನಿಸುಗಳ ವಲಯಕ್ಕೆ ಸೇರಿಸಿಕೊಂಡು ಬಿಟ್ಟಿದ್ದೇವೆ ಎಂಬುದು ಖಚಿತ. ಪೂಜೆ ಪುರಸ್ಕಾರದ ಅಡುಗೆಗಳಿಗೂ ಗೋಡಂಬಿಯ ಬಳಕೆ ಉಂಟು. ರಾಮನವಮಿಯ ಪನಿವಾರದಲ್ಲೂ ಪ್ರವೇಶಿಸಿರುವ ಗೋವೆಬೀಜವನ್ನು ಪರದೇಶಿ ಎನ್ನಲು ಮನಸ್ಸು ಒಪ್ಪುವುದಿಲ್ಲ. ಕರಾವಳಿಯ ಆರ್ಥಿಕ ಚಟುವಟಿಕೆಗಳಲ್ಲಿ ಮತ್ತು ರಫ್ತು ವ್ಯಾಪಾರದಲ್ಲೂ ಗೋವೆಬೀಜದ ಪಾಲು ಮಹತ್ವದ್ದು.
ಗುಡ್ಡೆ ಬದಿಯ ಬಂಜರು ಜಾಗಗಳಲ್ಲಿ ಚೆನ್ನಾಗಿ ಬೆಳೆಯುವ ಗೋವೆ ಮರಗಳು ಒಂದು ರೀತಿಯಲ್ಲಿ ಆದಾಯಕ್ಕೆ ವ್ಯಾಲ್ಯೂ ಎಡಿಶನ್ ಎನ್ನಬಹುದು. ಉತ್ತಮ ಜಮೀನಿನಲ್ಲಿ ಪಾಲು ಕೇಳದೇ ಹಾಡಿಯ ಮೂಲೆಯಲ್ಲಿ ಅಥವಾ ಬೋಳು ಗುಡ್ಡದಲ್ಲಿ ಬೆಳೆದು, ಹೆಚ್ಚು ಖರ್ಚಿನ ಆರೈಕೆ ಬೇಡದೇ ಗೋವೆ ಬೀಜವನ್ನು ಕೊಡುವ ಈ ಮರಗಳು ಸಣ್ಣ ರೈತರ ಪ್ರಮುಖ ಆದಾಯ ಮೂಲವೆನ್ನಲು ಅಡ್ಡಿಲ್ಲ. ಗೋವೆ ಬೀಜದ ರುಚಿಯೇ ಅದಕ್ಕಿರುವ ಬೆಲೆಯ ಗುಟ್ಟು.
ಹಸಿ ಗೋವೆ ಬೀಜದ ಪಲ್ಯದ ಕಥೆ ಡೊಡ್ಡದಿದೆ. ಇನ್ನೂ ಪೂರ್ತಿ ಬೆಳೆಯದ, ಆದರೆ ಹದವಾಗಿ ಬಲಿತ ಹಸಿ ಗೋವೆ ಬೀಜಗಳನ್ನು ಸಂಗ್ರಹಿಸಬೇಕು. ಆದರಿಂದ ಒಳಗಿನ ಬೀಜಗಳನ್ನು ಬೇರ್ಪಡಿಸುವ ಕೆಲಸ ಸ್ವಲ್ಪ ಸೂಕ್ಷ್ಮವಾದದ್ದು. ಮೈ ಕೈಗೆ ಸೊನೆ ತಾಗಿದರೆ ಗಾಯ ಖಚಿತ. ಎಳೆಯ ಹಸಿ ಬೀಜಗಳನ್ನು ಸಂಗ್ರಹಿಸಿ, ಅದಕ್ಕೆ ತೆಂಗಿನ ಕಾಯಿ ತುರಿಯ ಒಗ್ಗರಣೆ ಜೊತೆ, ನೀರುಬೆಲ್ಲ ಬೆರೆಸಿದಾಗ, ಗೋವೆ ಬೀಜದ ಪಲ್ಯ ತಯಾರಾದಂತೆ. ಈ ಸೀಪಲ್ಯದ ರುಚಿಯೂ ಕರಾವಳಿಯ ಅಪರೂಪದ ಬಾಲ್ಯದ ಪಟ್ಟಿಯಲ್ಲಿ ಸೇರಿ ಹೋಗಿದೆ.
ಗೋವೆ ಬೀಜವನ್ನು ಸುಟ್ಟು ತಿನ್ನುವ ಕೆಲಸವೂ ವಿಶಿಷ್ಟ. ಗೋವೆಬೀಜವನ್ನು ಹುರಿಯಲು ಒಂದು ದೊಡ್ಡ ಮಡಕೆ ಓಡಿನ ಅವಶ್ಯಕತೆ ಉಂಟು. ಮಡಕೆ ಓಡು ಸಿಗದಿದ್ದರೆ ದೊಡ್ಡ ಡಬ್ಬಿ ತಗಡು ಆದರೂ ಪರವಾಗಿಲ್ಲ. ನಮ್ಮ ಮನೆಗೆ ಮಕ್ಕಳು, ಬಂಧುಗಳು ಬಂದಾಗ, ಗೋವೆಬೀಜ ಸುಡುವ ಸಂಭ್ರಮ ಇಲ್ಲಿ ನೆನಪಾಗುತ್ತದೆ. ಸಂಜೆಯ ಸಮಯ ಮನೆ ಮುಂದಿನ ಅಂಗಳದ ಮೂಲೆಯ ಒಲೆಯಲ್ಲಿ ಬೆಂಕಿ ಹಚ್ಚಿ ಅದರ ಮೇಲೆ ಒಂದು ದೊಡ್ಡ ತಗಡನ್ನು ಇಡುತ್ತಾರೆ. ಚೆನ್ನಾಗಿ ಒಣಗಿಸಿದ ಬೀಜಗಳನ್ನು ತಂದು ಅದರ ಮೇಲೆ ಹರವುತ್ತಾರೆ. ಇದೆಲ್ಲಾ ಸಾಮಾನ್ಯವಾಗಿ ಅಮ್ಮಾಮ್ಮನ ಕೆಲಸ. ನಾಲ್ಕೈದು ನಿಮಿಷಗಳಲ್ಲಿ ಗೋವೆಬೀಜಗಳು ಸೊನೆ ಕಾರತೊಡಗುತ್ತವೆ. `ಹಿಸ್' `ಪುಸ್' ಎಂದು ಸದ್ದು ಮಾಡುತ್ತಾ ಕಪ್ಪನೆಯ ಸೊನೆಯನ್ನು ದೂರಕ್ಕೆ ಸಿಡಿಸುವೂದು ಉಂಟು. ಗೋವೆ ಬೀಜವನ್ನು ಸುಡುವುದನ್ನು ನೋಡುತ್ತಾ ನಿಂತಿರುವ ಮಕ್ಕಳು ದೂರ ಹೋಗಬೇಕೆಂಬ ಸೂಚನೆ ಅದು. ಅದರ ಸೊನೆ ಮೈಗೋ, ಮುಖಕ್ಕೋ ತಾಗಿದರೆ ಗಾಯವಾಗಿ ಕಲೆಯಾಗಿ ಬಿಟ್ಟೀತು ಎಂಬ ಭಯ. ಗೋವೆಬೀಜಗಳು ಸೊನೆ ಕಾರಿದ ಕೂಡಲೆ ಕೆಳಗಿನ ಒಲೆಯಿಂದ ಚೂರು ಬೆಂಕಿಯನ್ನು ಎತ್ತಿ ಮೇಲಿನ ತಗಡಿಗೆ ಹಾಕುತ್ತಾರೆ. ಒಮ್ಮೆಗೇ `ಭಗ್' ಎಂದು ಇಡೀ ತಗಡಿಗೆ ಬೆಂಕಿ ಹತ್ತುತ್ತದೆ. ಸೊನೆ ಕಾರಿದ ಬೀಜಗಳೆಲ್ಲ ಧಗಧಗನೆ ಬೆಂಕಿಯಿಂದ ಉರಿಯಲು ಆರಂಭವಾಗುತ್ತದೆ. ಒಂದೈದು ನಿಮಿಷಗಳಲ್ಲಿ ಅವನ್ನೆಲ್ಲ ಈಚೆಗೆ ನೆಲಕ್ಕೆ ಸುರಿದು ಬೆಂಕಿ ಆರಿಸಿ ಇನ್ನೂ ಬಿಸಿ ಇರುವಾಗಲೇ ಕಲ್ಲಿನಿಂದ ಕುಟ್ಟಬೇಕು. ಆಗ ಹೊರಗಿನ ಕವಚ ಬೇರೆಯಾಗಿ ಒಳಗಿನ ಬೀಜ ಕೈಗೆ ಸಿಗುತ್ತದೆ. ಕಲ್ಲಿನಿಂದ ಕುಟ್ಟಿ ಕವಚ ಬೇರೆ ಮಾಡುವುದು ಸೂಕ್ಷ್ಮವಾದ ಕೆಲಸ. ಬೀಜಗಳನ್ನು ಮನೆಗೆ ತಂದ ನಂತರ, ಬಾಕಿ ಉಳಿದ ಕೆಲಸ ಒಂದೇ - ತಿನ್ನುವ ಕೆಲಸ. ಬಿಸಿ ಬಿಸಿ ಗೋವೆ ಬೀಜದ ಜೊತೆ ಹುರಿದ ಹಲಸಿನ ಹಪ್ಪಳ ಇದ್ದರಂತೂ ರುಚಿಯು ದುಪ್ಪಟ್ಟಾದೀತು!
ಗೋವೆ ಹಣ್ಣಿನ ರುಚಿ ಅಷ್ಟೇನೂ ವಿಶೇಷ ಇಲ್ಲ. ಕನರು, ಕನರು ರುಚಿಯ, ಹುಳಿ ಸಿಹಿ ಮಿಶ್ರಣದ ಗೋವೆ ಹಣ್ಣನ್ನು ಜಾಸ್ತಿ ತಿಂದರೆ ಕೆಮ್ಮು ಬರುತ್ತದೆಂದು ಹಿರಿಯರು ಗದರಿಸುತ್ತಿದ್ದರು. ಆದರೂ ಬೇಸಿಗೆಯ ಬಿಸಿಗೆ ಹೆಚ್ಚು ರಸವಿರುವ ಗೋವೆ ಹಣ್ಣನ್ನು ತಿಂದರೆ ಬಾಯಾರಿಕೆ ಕಡಿಮೆ ಆದೀತು ಎಂದು ಮಕ್ಕಳು ಗೋವೆ ಹಣ್ಣನ್ನು ತಿಂದದ್ದೇ ತಿಂದದ್ದು. ಅದರ ರಸ ಬಿದ್ದ ಜಾಗದಲ್ಲಿ ಬಟ್ಟೆ ಪೂರ್ತಿ ಕಲೆ ಕಲೆ! ಬಿಳಿ ಬಿಳಿ ಅಂಗಿಯ ಗೋವೆ ಹಣ್ಣಿನ ಗಾಯ ಮುಗಿಯುವ ಸಮಯಕ್ಕೆ ಕೆಂಪು ಕೆಂಪು ಕಲೆಗಳಿಂದ ತುಂಬಿ ಹೋಗುತ್ತಿತ್ತು! ನಾವು ಓದಿದ ಹೈಸ್ಕೂಲಿನ ಆಟದ ಮೈದಾನದ ಸುತ್ತಲೂ ಹತ್ತಾರು ಗೋವೆ ಮರಗಳು ಒಂದೊಂದು ಮರದಲ್ಲಿ ರುಚಿಯ ಹಣ್ಣುಗಳು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ, ಬಣ್ಣ ಬಣ್ಣದ ಗೋವೆ ಹಣ್ಣುಗಳಿಗೆ ಕಲ್ಲು ಹೊಡೆದು ಬೀಳಿಸುವುದೇ ನಮ್ಮ ಕೆಲಸ. ಗೋವೆ ಹಣ್ಣುಗಳನ್ನು ನಮ್ಮ ಕರಾವಳಿಯಲ್ಲಿ ಗಂಟಿಗೆ ಹಾಕುವುದೇ ಜಾಸ್ತಿ. ಗೋವಾದಲ್ಲಿ ಫೆನ್ನಿ ತಯಾರಿಸಲು ಉಪಯೋಗವಾಗುತ್ತದೆ. ಘಟ್ಟದ ಮೇಲಿನ ಊರುಗಳಲ್ಲಿ ಗೋವೆ ಹಣ್ಣನ್ನು ಕುಕ್ಕೆಯಲ್ಲಿಟ್ಟು ಮಾರುವುದೂ ಉಂಟು. ಮುಖ್ಯವಾಗಿ ಶಾಲೆ ಮಕ್ಕಳೇ ಅದಕ್ಕೆ ಗಿರಾಕಿ.
ಈ ವರ್ಷ ಗೋವೆ ಬೀಜಕ್ಕೆ ಒಳ್ಳೆಯ ಬೆಲೆ ಬಂದಿದೆ. ಕರಾವಳಿಯ ಗೋವೆ ಬೀಜದ ಕಾರ್ಖಾನೆಗಳು ಈ ಸುತ್ತಲಿನ ಹಲವರಿಗೆ ಉದ್ಯೋಗ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಕಚ್ಛಾ ಗೋಡಂಬಿಯನ್ನು ವಿದೇಶದಿಂದ ತರಿಸಬೇಕಾದ ಪರಿಸ್ಥಿತಿಯು, ಆ ಉದ್ಯಮಕ್ಕೆ ಒಂದು ಅನಿಶ್ಟತತೆಯನ್ನು ರೂಪಿಸಿದೆ ಎನ್ನಬಹುದು. ಮುಖ್ಯವಾಗಿ ರಫ್ತನ್ನು ಅವಲಂಭಿಸಿರುವ ಗೋಡಂಬಿ ಉದ್ಯಮವು ವಿಶ್ವದೆಲ್ಲೆಡೆ ಹರಡಿರುವ ರಿಸೆಶನ್‌ನಿಂದಾಗಿ, ಹೆಚ್ಚಿನ ಏರುಪೇರಿಗೆ ಒಳಗಾಗುವ ಸಂಭವವು ಸಹಜವೇ .
ಎಂ. ಶಶಿಧರ ಹೆಬ್ಬಾರ್ ಹಾಲಾಡಿ

maavina midi

ಮಾವಿನ ಮಿಡಿ
ಗೋರಾಜೆ ಶಾಲೆಯಿಂದ ಮನೆಗೆ ವಾಪಾಸು ಬರುವಾಗ, ಹುಡುಗರಲ್ಲಿ ಒಂದು ಸುದ್ಧಿ ಹಬ್ಬಿತು. `ಮುತ್ತಯ್ಯ ಶೆಟ್ರ ಮನೆ ಹತ್ತಿರ ಮಾವಿನಮಿಡಿ ಕೊಯ್ತರಂಬ್ರು' ನಮ್ಮ ಹುಡುಗರ ಸೈನ್ಯ, ದಾರಿ ಬದಲಿಸಿ, ನೆಟ್ಟಗೆ ಮುಡಾರಿಯ ಹಾಡಿದಾರಿ ಹಿಡಿದು, ಮುತ್ತಯ್ಯ ಶೆಟ್ರ ಮನೆ ಹತ್ತಿರ ಸಾಗಿತು. ಗುಡ್ಡೆ ಬದಿಯ ಎತ್ತರವಾದ ಮಾವಿನ ಮರದಲ್ಲಿ ಯಾರೋ ಕುಳಿತು ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದುದು ದೂರದಿಂದಲೇ ಕಾಣುತ್ತಿತ್ತು. ಮರದ ಬುಡಕ್ಕೆ ಹೋಗಿ ನೋಡಿದರೆ ನಾಲ್ಕೆಂಟು ಮಂದಿ ನೆರೆಹೊರೆಯವರು ಚೀಲ ಅಥವಾ ಕುಕ್ಕೆ ಹಿಡಿದುಕೊಂದು ತಲೆ ಮೇಲೆತ್ತಿ, ಮಾವಿನ ಮರದ ತುದಿಯನ್ನೇ ನೋಡುತ್ತಿದ್ದರು. ಮೇಲೇರಿದಾತ ಮಾವಿನ ಮಿಡಿಯನ್ನು ಕೊಯ್ಯುತ್ತಿದ್ದ. ಅವನ ಕೈ ತಪ್ಪಿ ಕೆಳಗೆ ಬಿದ್ದಿದ್ದ ಮಿಡಿಗಳನ್ನು ನಾವೆಲ್ಲ ಆರಿಸಿ ತಿನ್ನುತ್ತಿದ್ದೆವು. ಮಕ್ಕಳೆಲ್ಲ ಮನೆಗೆ ಹೋಯಿನಿ? ಎಂದು ಗದರಿಸಿದ್ದು ಯಾರೆಂದು ನೋಡಿದರೆ ನಮ್ಮ ಅಮ್ಮಮ್ಮಾ ಮಾವಿನ ಮಿಡಿ ತರಲು ಅವರೂ ಬಂದು, ಆ ಮರದ ಬುಡದಲ್ಲಿ ನಿಂತಿದ್ದರು. ನಾಲ್ಕಾರು ಮಿಡಿತಿಂದು ನಾವೆಲ್ಲ ಮನೆಗೆ ಹೋದೆವು. ಸ್ವಲ್ಪ ಹೊತ್ತಾದ ನಂತರ ಒಂದು ಕುಕ್ಕೆಯ ತುಂಬ ಮಾವಿನ ಮಿಡಿಯ ವಾಸನೆ ಘಂ ಎಂದು ತುಂಬಿಕೊಂಡಿತು. ಅದಾಗಲೇ ಸಂಜೆಗತ್ತಲು. ಅಮ್ಮಮ್ಮ ಮೆಟ್ಟು ಕತ್ತಿಯ ಮುಂದೆ ಕುಳಿತು, ಮಾವಿನ ಮಿಡಿಗಳನ್ನು ಸೋಸಲು ತೊಡಗಿದರು. `ಇವತ್ತು ರಾತ್ರಿಯೇ ಉಪ್ಪಿಗೆ ಹಾಕಿ ಇಡ್ಕ್ , ಮತ್ತೆ ಹಾಂಗೆ ಬಿಟ್ರೆ ಮಿಡಿ ಹಾಳಾತ್' ಎನ್ನುತ್ತಾ ಒಂದೊಂದೇ ಮಿಡಿಯನ್ನು ಆರಿಸಿ ಅದರ ಬೊಟ್ಟು ಎಷ್ಟು ಬೇಕೋ ಉಳಿಸಿಕೊಂಡು ದಂಟನ್ನು ಕತ್ತರಿಸಿ ಮತ್ತೊಂದು ಕಡೆ ರಾಶಿ ಹಾಕುತ್ತಿದ್ದರು.
ಉಪ್ಪಿನಕಾಯಿ ಮಾಡಲು ಆರಿಸುವ ಮಾವಿನ ಮಿಡಿಗೆ ಅದರದ್ದೇ ಆದ ಒಂದು ಹದ ಇದೆ, ಮಿಡಿಗಳು ಹದವಾಗಿ ಬಲಿತಿರಬೇಕು. ಒಳಗಿರುವ ಕೊಂಗಿಲ ಸ್ವಲ್ಪ ಮೃದುವಾಗಿರಬೇಕು. ಗೊರಟು ಆಗಲು ಆರಂಭವಾಗಿರಬಾರದು. ಮಿಡಿ ಕೊಯ್ಯುವಾಗ ಮಿಡಿಗೆ ಗಾಯವಾಗಿರಬಾರದು, ಮಾವಿನ ಮಿಡಿ ಬಿಸಿಲಿಗೆ ಸುಟ್ಟ್ಟು ಕಪ್ಪಾಗಿರಬಾರದು, ಸೊನೆ ಸುಟ್ಟಿರಬಾರದು. ಒಂದೇ ಗಾತ್ರದ ಮಿಡಿಗಳನ್ನು ಆರಿಸಿ ಪ್ರತ್ಯೇಕಿಸಿದ ನಂತರ ಅಮ್ಮಮ್ಮ ಉಪ್ಪಿನ ಭರಣಿಯಲ್ಲಿ ತುಂಬುತ್ತಿದ್ದರು.
ದೊಡ್ಡ ಪಾತ್ರೆಗೆ ತಳದಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ, ಅದರ ಮೇಲೆ ಒಂದು ಪದರ ಮಾವಿನ ಮಿಡಿ ಹಾಕುತ್ತಾರೆ. ಅದರ ಮೇಲೆ ಪುನಃ ಒಂದಿಂಚು ಉಪ್ಪಿನ ಪದರ ಅದರ ಮೇಲೆ ಮಿಡಿ ಪುನಃ ಉಪ್ಪಿನ ಪದರ ಈ ರೀತಿ ಪಾತ್ರೆ ತುಂಬುವ ತನಕ ಮಿಡಿ ಮತ್ತು ಉಪ್ಪು ತುಂಬಿಸಿ ಪಾತ್ರೆಯ ಮೇಲೆ ಭಾರಕ್ಕೆಂದು ಸೀತಾನದಿಯಿಂದ ತಂದ ದೊಡ್ಡ ಒರೆಯುವ ಕಲ್ಲುಗಳನ್ನು ಇಡುತ್ತಾರೆ , ಆ ಕಲ್ಲುಗಳ್ಯಾಕೆ `ಮಿಡಿ ಸಮಾ ಚಿರುಟಬೇಕು'.
ಒಂದೆರಡು ದಿನ ಉಪ್ಪಿನಲ್ಲಿ ಕುಳಿತ ಮಿಡಿಗಳು ಚಿರುಟುತ್ತವೆ, ಕಲ್ಲು ಉಪ್ಪು ಮಿಡಿಯ ನೀರನ್ನು ಹೀರಿಕೊಂಡು ಪಾತ್ರೆಯ ತುಂಬಾ ಉಪ್ಪಿನ ನೀರು ತುಂಬುತ್ತದೆ.-ಮಾವಿನ ಮಿಡಿಗಳು ಗಾತ್ರದಲ್ಲಿ ಚಿಕ್ಕದಾಗಿ ಚಿರುಟುತ್ತವೆ. ಆ ಮಿಡಿಗಳನ್ನು ಆರಿಸಿ ನೆರಳಿನಲ್ಲಿ ಒಣಗಿಸಬೇಕು. ಅಮ್ಮಮ್ಮಾ ಮಿಡಿಗಳನ್ನು ಆರಲು ಹಾಕುತ್ತಿದ್ದ ಜಾಗವೆಂದರೆ ಮಧ್ಯದ ಪಡಸಾಲೆಯ ನೆಲದಲ್ಲಿ. ಉಪ್ಪಿನಲ್ಲಿ ಚಿರುಟಿದ ಮಿಡಿಗಳು ಪಡಸಾಲೆಯ ನೆಲದಲ್ಲಿ ಹರಡಿಕೊಂಡಾಗ ಮನೆ ತುಂಬ ಆ ಮಿಡಿಯದೇ ಪರಿಮಳ. ಅಮ್ಮಮ್ಮನ ಕಣ್ಣು ತಪ್ಪಿಸಿ ನಾವು ಒಂದೊಂದೇ ಮಿಡಿಯನ್ನು ತಿನ್ನುವುದು ಉಂಟು. ನೀರಿಗೆ ಹಾಕಿದ ಮಿಡಿಗಳಲ್ಲಿ ಒಂದೊಂದು ಬಣ್ಣಗೆಟ್ಟು ನೀರು ನೀರಾಗಿ ಇರುತ್ತಿತ್ತು. ಅದನ್ನು ತಿನ್ನಲು ಪರವಾನಗಿ ಉಂಟು, ಏಕೆಂದರೆ ಆ ಮಿಡಿಯನ್ನು ಉಪ್ಪಿನಕಾಯಿ ಮಾಡಿದರೆ ಬೇಗ ಕೆಟ್ಟು ಹೋಗುತ್ತದಂತೆ.
`ಮಿಡಿ ನೆನಸಿದರೆ ಸಾಕಾ? ಮೆಣಸಿನ ಕಾಯಿ ತರ್‍ಕಲೆ? ಅಂಗಡಿಯಿಂದ ಒಳ್ಳೆಯ ಮೆಣಸಿನ ಕಾಯಿ ತಂದು ಉಪ್ಪಿನಕಾಯಿ ಮಾಡುವ ಸಂಭ್ರಮ. ಮೆಣಸಿನ ಕಾಯಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಸ್ವಲ್ಪ ಕುಟ್ಟಿ ನಂತರ ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯುವಿಕೆ! ಆಗ ಇನ್ನೂ ಮೆಣಸಿನ ಪುಡಿ ಮಾಡುವ ಮಿಲ್ ನಮ್ಮೂರಿಗೆ ಬಂದಿರಲಿಲ್ಲ. ದೊಡ್ಡ ಅರೆಯುವ ಕಲ್ಲಿನಲ್ಲಿ ಮೆಣಸಿನ ಕಾಯಿ ಹಾಕಿ ಕುದಿಸಿದ ಉಪ್ಪು ನೀರನ್ನು ಬೆರೆಸಿ, ಚೆನ್ನಾಗಿ ಅರೆಯುವ ಕೆಲಸ ನಿಜಕ್ಕೂ ಕಷ್ಟದ್ದು. ಅರೆಯುವಾಗ ಸಾಸಿವೆ, ಇಂಗು ಬೆರೆಸುತ್ತಿದ್ದರು. ಅರೆದು ಅರೆದು ಒಳ್ಳೆಯ ಉಪ್ಪಿನಕಾಯಿ ರಸ ತಯಾರಾದಾಗ ಪಿಂಗಾಣಿ ಜಾಲಿ ಅಟ್ಟದಿಂದ ಕೆಳಗಿಳಿಯುತ್ತದೆ. ಚೊಕ್ಕಟ ಮಾಡಿದ ದೊಡ್ಡ ಜಾಲಿಯಲ್ಲಿ ಚಿರುಟಿದ ಮಾವಿನ ಮಿಡಿಗಳನ್ನು ಹಾಕಿ, ಮೆಣಸಿನ ಕಾಯಿ ರಸವನ್ನು ತುಂಬಿಸಿದರೆ ಉಪ್ಪಿನಕಾಯಿ ತಯಾರು. ಪಿಂಗಾಣಿ ಭರಣಿಯ ಬಾಯಿಗೆ ಬಟ್ಟೆ ಸುತ್ತಿ ಮುಚ್ಚಳವನ್ನು ಭದ್ರವಾಗಿ ತಿರುಪಿ, ಪುನಃ ಅಟ್ಟದ ಮೇಲೆ ಇಡುತ್ತಾರೆ. `ಅದೇನಿದ್ದರೂ ಈ ಜಾಲಿಯ ಉಪ್ಪಿನಕಾಯಿಯನ್ನು ಮಳೆಗಾಲ ಬರುವ ತನಕ ಮುಟ್ಟಬಾರದು.' ಎನ್ನುತ್ತಿದ್ದರು ಅಮ್ಮಮ್ಮಾ. ದಿನದ ಉಪಯೋಗಕ್ಕೆ ಬೇರೆ ಚಿಕ್ಕ ಮರಿಗೆಯಲ್ಲಿ ಸ್ವಲ್ಪ ಉಪ್ಪಿನಕಾಯಿ ಹಾಕಿಡುತ್ತಿದ್ದರು. ಮುಖ್ಯವಾಗಿ ಮಿಡಿ ಉಪ್ಪಿನಕಾಯಿಯನ್ನು ಸಾಧ್ಯವಾದಷ್ಟು ದಿನ ಕಾಪಿಡುವುದೇ ಒಂದು ಹೆಮ್ಮೆಯ ವಿಚಾರ. `ಎರಡು ವರ್ಷ ಇಟ್ಟರೂ ಈ ಉಪ್ಪಿನಕಾಯಿ ಲಾಯಕ್ ಇರತ್' ಎನ್ನುವಾಗ ಅಮ್ಮಮ್ಮನಿಗೆ ಹೆಮ್ಮೆ. ಜಾಸ್ತಿ ಮಾವಿನ ಮಿಡಿಗಳು ಸಿಗುವ ವರ್ಷ ಸ್ವಲ್ಪ ಹೆಚ್ಚಾಗಿಯೇ ಉಪ್ಪಿನಕಾಯಿ ಮಾಡಿ ಬಂಧುಗಳಿಗೆ ಸ್ನೇಹಿತರಿಗೆ ಸ್ವಲ್ಪ ಕಳಿಸಿಕೊಡುವುದೂ ಉಂಟು. ಅಕ್ಕಪಕ್ಕದ ಮನೆಗಳಿಗೂ ಕೊಡುತ್ತಿದ್ದರು. ಆಸಾಡಿಯ ಮಳೆ ಬೀಳುವಾಗ ಹಿಂದಿನ ಮನೆಯ ನರ್‍ಸಿ ಬಂದು `ನಮ್ಮ ಲಚ್ಚುಗೆ ಸ್ವರ ಬಂದ್ ಬಾಯಿ ರುಚಿ ಇಲ್ಲೆ ಕಾಣಿ, ಒಂಚೂರು ಉಪ್ಪಿನಕಾಯಿ ಕೊಡಿನಿ' ಎಂದು ಅಂಗಲಾಚಿದಾಗ ಅಮ್ಮಾಮ್ಮ ಇಲ್ಲ ಅನ್ನುವವರಲ್ಲ. ಚಿಕ್ಕ ಲೋಟದಲ್ಲಿ ಸ್ವಲ್ಪ ರಸ ಜಾಸ್ತಿಯೇ ಹಾಕಿ ನಾಲ್ಕೆಂಡು ಮಿಡಿ ಉಪ್ಪಿನ ಕಾಯಿಯನ್ನು ಕೊಡುತ್ತಿದ್ದರು. “ನಿಮ್ಮ ಉಪ್ಪಿನಕಾಯಿ ತಿಂದೇ ನಮ್ಮ ಲಚ್ಚು ಜ್ವರ ಬಿಡ್ತ್ ಕಾಣಿ “ ಎಂದು ನಂತರ ನರ್‍ಸಿ ಜಾಪಿನಿಂದ ಹೊಗಳುತ್ತಿದ್ದುದೂ ಉಂಟು.
ಒಳ್ಳೆಯ ಮಿಡಿ ಉಪ್ಪಿನಕಾಯಿಯಲ್ಲಿ ಔಷಧೀಯ ಗುಣವೂ ಉಂಟು ಎನ್ನುತ್ತಾರೆ. ಅದಕ್ಕೆ ಬೆರೆಸುವ ಸಾಸಿವೆ, ಇಂಗು ಮೊದಲಾದ ಪರಿಕರಗಳ ಔಷಧೀಯ ಗುಣದ ಜೊತೆ ಮಾವಿನ ಮಿಡಿಯಲ್ಲೂ ಔಷಧೀಯ ಗುಣಗಳು ಇರಲಿಕ್ಕೆ ಬೇಕು. ಮಾವಿನಕಾಯಿಯ ಸೊನೆ ಪರಿಮಳವೇ ಮೂಗಿನ ನೆಗಡಿತನವನ್ನು ದೂರ ಓಡಿಸೀತು! ಒಳ್ಳೆಯ ಅಪ್ಪೆಮಿಡಿ ಚೊಟ್ಟನ್ನು ಮುರಿದಾಗ ಬರುವ ರಸಕ್ಕೆ ಬೆಂಕಿ ತೋರಿಸಿದರೆ ಪೆಟ್ರೋಲಿನ ರೀತಿ ರಸವು ದಹಿಸುತ್ತದೆ. ಜೀರಿಗೆ ಮಾವಿನಮಿಡಿ ಅಪ್ಪೆ ಮಿಡಿಗಳ ಪರಿಮಳವು ಅವುಗಳಲ್ಲಿರುವ ವಿಶಿಷ್ಟ ರಾಸಾಯನಿಕ ವಸ್ತುಗಳ ಮಿಶ್ರಣದಿಂದಲೇ ಬರುವುದು ತಾನೆ. ಅವುಗಳಿಂದ ಮಾಡಿದ ಉಪ್ಪಿನಕಾಯಿ ರಸವನ್ನು ಮಾತ್ರ ಬಳಸಿ ಅನ್ನ ಕಲಸಿ ಊಟ ಮಾಡಿದ ರೋಗಿಗಳು ಬೇಗನೆ ಗುಣಹೊಂದಿದರೆ ಅಚ್ಚರಿಯೇನು ಇಲ್ಲ. ತರಕಾರಿಗಳು ದುರ್ಲಭವಾಗಿದ್ದ ಮಳೆಗಾಲದಲ್ಲಿ ಉಪ್ಪಿನಕಾಯಿ ರಸದಲ್ಲಿ ಕಲಸಿದ ಅನ್ನ ನಿಜಕ್ಕೂ ರುಚಿಕರ. ಇತ್ತ ಮಜ್ಜಿಗೆ ಅನ್ನಕ್ಕೂ ನಂಜಿಕೊಳ್ಳಲು ಮಾವಿನಮಿಡಿಯು ಪ್ರಶಸ್ತ!
ನಮ್ಮ ಮನೆಯ ಮೂಲೆಗದ್ದೆಯ ಅಂಚಿನಲ್ಲಿ ಎತ್ತರವಾದ ಒಂದು ಕಾಟುಮಾವಿನ ಮರವಿತ್ತು. ಅದರ ಮಿಡಿಗಳು ಒಳ್ಳೆಯ ಅಪ್ಪೆ ಮಿಡಿಯ ರುಚಿಯುಳ್ಳದ್ದು ಎನ್ನುತ್ತಿದ್ದರು. ಆದರೆ ಆ ಎತ್ತರದ ಮರದಲ್ಲಿ ಮಿಡಿ ಬಿಟ್ಟಿದ್ದನ್ನೇ ನಾನು ಕಂಡಿಲ್ಲ. ಅದರಲ್ಲಿ ಜಾಸ್ತಿ ಕಾಯಿ ಆಗುವುದಿಲ್ಲ ಎಂಬ ಸಿಟ್ಟಿನಿಂದ ಪ್ರತಿವರ್ಷ ಅದರ ಟೊಂಗೆಗಳನ್ನು ಕಡಿದು ಸುಡುಮಣ್ಣನ್ನು ಮಾಡಿಸುತ್ತಿದ್ದರು ಅಥವಾ ತೋಟದ ಬುಡಮಾಡಲು ಉಪಯೋಗಿಸುತ್ತಿದ್ದರು. ನಮ್ಮ ಮನೆಯ ಹತ್ತಿರವೇ ತೋಟದ ಮೂಲೆಯಲ್ಲಿ ಎರಡು ದೊಡ್ಡ ಕಾಟು ಮಾವಿನ ಮರಗಳಿದ್ದವು. ಒಂದರಲ್ಲಿ ಮಿಡಿ ಕಡಿಮೆ, ಇನ್ನೊಂದರಲ್ಲಿ ಸಾವಿರಾರು ಮಿಡಿಗಳು ಆಗುತ್ತಿದ್ದವು. ಆದರೆ ಆ ಮಿಡಿಗಳಿಗೆ ಪರಿಮಳ ಕಡಿಮೆ; ರುಚಿಯೂ ಕಡಿಮೆ. ಬರೀ ಹುಳಿಯೊಂದೇ ಆ ಮಾವಿನ ಮಿಡಿಗಳ ವಿಶೇಷ. ಅದು `ದಿಂಡಿನಕಾಯಿ' ಎಂದು ಶೃಂಗೇರಿ ಚಿಕ್ಕಮ್ಮ ಹೇಳಿದರು. ತಮ್ಮ ಊರಿನ ಕಡೆಯ ಯಾವುದೋ ಮಾವಿನ ಮರಕ್ಕೆ ಹೋಲಿಸುತ್ತಾ ಸ್ವಲ್ಪ ಒಳ್ಳೆಯ ಪರಿಮಳವಿರುವ ಮಿಡಿಬೇಕೆಂದಾಗ ಅಬ್ನಿಕಟ್ಟೆ ಅಥವಾ ತಾರಿಕಟ್ಟೆಯಿಂದ ಮಾವಿನ ಮಿಡಿಗಳನ್ನು ಅಮ್ಮಮ್ಮ ತರಿಸುತ್ತಿದ್ದರು. ಸಾಕಷ್ಟು ಉಪ್ಪಿನಕಾಯಿ ಮಾಡಿದ ಮೇಲೂ ಎಲ್ಲಾದರೂ ಒಳ್ಳೆಯ ಮಾವಿನ ಮಿಡಿ ಸಿಕ್ದಿದರೆ, ತರಿಸಿ ಚೊಟ್ಟು ಕತ್ತರಿಸಿ ಉಪ್ಪಿನಲ್ಲಿ ನೆನಸಿಯೇ ಬಿಡುತ್ತಾರೆ. `ಎರಡು ವರ್ಷ ಇಟ್ಟರೂ ಮಿಡಿ ಉಪ್ಪಿನಕಾಯಿ ಹಾಳಾತಿಲ್ಲೆ' ಎನ್ನುತ್ತಾ ಮೆಣಸಿನ ಕಾಯಿ ಅರೆದು ಮಿಡಿಯ ಜೊತೆಗೆ ಪಿಂಗಾಣಿ ಜಾಲಿಗೆ ತುಂಬಿಸುತ್ತಾರೆ. ಮಾವಿನ ಮಿಡಿ ಎಂದರೆ ಅಮ್ಮಮ್ಮಾನಿಗೆ ಎಲ್ಲಿಲ್ಲದ ಅಂಗಲಾಪು.
- ಎಂ. ಶಶಿಧರ ಹೆಬ್ಬಾರ್ ಹಾಲಾಡಿ

Bekkina Bananthana


Cat brings its puppies from home next street, for future growth of its off springs: kitten play in our home and grow.