ಗೋಯ್ ಬೀಜ
ಬಿಸಿಲುಗಾಲದ ಬೆಳದಿಂಗಳ ರಾತ್ರಿ; ಹಗಲಿಡೀ ಬಿಸಿಲಿನ ಬೇಗೆಗೆ ಬಸವಳಿದ ದೇಹ, ರಾತ್ರಿಯ ಬೆಳದಿಂಗಳ ಸ್ನಿಗ್ದ ವಾತಾವರಣವನ್ನು ಸುಖಿಸುತ್ತಿತ್ತು. ತಿಂಗಳ ಬೆಳಕಿನಲ್ಲಿ ತಂಗಾಳಿ ಬೀಸುತ್ತಿದ್ದಾಗ, ನಾವೆಲ್ಲ ತಟ್ಟವಟ್ಟು ಜೋಯಿಸರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದೆವು. ಆ ದಿನ ರಾಮನವಮಿಯ `ವಸಂತ' ಅಂದರೆ ಫಲಹಾರ! ಪೂಜೆ ಮುಗಿದ ನಂತರ ಖಾದ್ಯ ತಿನ್ನಲು ಕುಳಿತೆವು - ಪಾನಕ ಮತ್ತು ಅಂದಿನ ವಿವಿಧ ಬಗೆಯ ರುಚಿಕರ ಖಾದ್ಯ ತಿನ್ನಲು. ಕೋಸಂಬರಿ, ಕಡಲೆಕಾಳಿನ ಕೋಸುಂಬರಿ, ಹಲಸಿನ ಸೊಳೆ, ಮೊದಲಾದ ತಿನಿಸುಗಳ ಜೊತೆ ಗೋಡಂಬಿ ಸಿಹಿ ಪಲ್ಯವನ್ನು ಬಡಿಸಿದ್ದರು. ಎಳೆಗೋಡಂಬಿಯನ್ನು ಬೆಲ್ಲ ಮತ್ತು ಕಾಯಿತುರಿಯ ಜೊತೆ ಸೇರಿಸಿದರೆ, ರುಚಿಯಾದ ತಿನಿಸು ಸಿದ್ಧ.
ಗೋವೆ ಬೀಜದ ಮೂಲವು ಪರದೇಶದಲ್ಲಿದೆ. ಗೋವಾಕ್ಕೆ ಬಂದ ಪೋರ್ಚುಗೀಸರ ಮೂಲಕ ಅದು ನಮ್ಮ ದೇಶವನ್ನು ಪ್ರವೇಶಿಸಿತು ಎಂದು ಸಸ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ. ಅದು ಯಾವ ದೇಶದ್ದಾದರೇನು, ಅದರ ರುಚಿಗೆ ನಾವೆಲ್ಲ ಮಾರು ಹೋಗಿ ಅದನ್ನು ನಮ್ಮ ಆಪ್ತ ತಿನಿಸುಗಳ ವಲಯಕ್ಕೆ ಸೇರಿಸಿಕೊಂಡು ಬಿಟ್ಟಿದ್ದೇವೆ ಎಂಬುದು ಖಚಿತ. ಪೂಜೆ ಪುರಸ್ಕಾರದ ಅಡುಗೆಗಳಿಗೂ ಗೋಡಂಬಿಯ ಬಳಕೆ ಉಂಟು. ರಾಮನವಮಿಯ ಪನಿವಾರದಲ್ಲೂ ಪ್ರವೇಶಿಸಿರುವ ಗೋವೆಬೀಜವನ್ನು ಪರದೇಶಿ ಎನ್ನಲು ಮನಸ್ಸು ಒಪ್ಪುವುದಿಲ್ಲ. ಕರಾವಳಿಯ ಆರ್ಥಿಕ ಚಟುವಟಿಕೆಗಳಲ್ಲಿ ಮತ್ತು ರಫ್ತು ವ್ಯಾಪಾರದಲ್ಲೂ ಗೋವೆಬೀಜದ ಪಾಲು ಮಹತ್ವದ್ದು.
ಗುಡ್ಡೆ ಬದಿಯ ಬಂಜರು ಜಾಗಗಳಲ್ಲಿ ಚೆನ್ನಾಗಿ ಬೆಳೆಯುವ ಗೋವೆ ಮರಗಳು ಒಂದು ರೀತಿಯಲ್ಲಿ ಆದಾಯಕ್ಕೆ ವ್ಯಾಲ್ಯೂ ಎಡಿಶನ್ ಎನ್ನಬಹುದು. ಉತ್ತಮ ಜಮೀನಿನಲ್ಲಿ ಪಾಲು ಕೇಳದೇ ಹಾಡಿಯ ಮೂಲೆಯಲ್ಲಿ ಅಥವಾ ಬೋಳು ಗುಡ್ಡದಲ್ಲಿ ಬೆಳೆದು, ಹೆಚ್ಚು ಖರ್ಚಿನ ಆರೈಕೆ ಬೇಡದೇ ಗೋವೆ ಬೀಜವನ್ನು ಕೊಡುವ ಈ ಮರಗಳು ಸಣ್ಣ ರೈತರ ಪ್ರಮುಖ ಆದಾಯ ಮೂಲವೆನ್ನಲು ಅಡ್ಡಿಲ್ಲ. ಗೋವೆ ಬೀಜದ ರುಚಿಯೇ ಅದಕ್ಕಿರುವ ಬೆಲೆಯ ಗುಟ್ಟು.
ಹಸಿ ಗೋವೆ ಬೀಜದ ಪಲ್ಯದ ಕಥೆ ಡೊಡ್ಡದಿದೆ. ಇನ್ನೂ ಪೂರ್ತಿ ಬೆಳೆಯದ, ಆದರೆ ಹದವಾಗಿ ಬಲಿತ ಹಸಿ ಗೋವೆ ಬೀಜಗಳನ್ನು ಸಂಗ್ರಹಿಸಬೇಕು. ಆದರಿಂದ ಒಳಗಿನ ಬೀಜಗಳನ್ನು ಬೇರ್ಪಡಿಸುವ ಕೆಲಸ ಸ್ವಲ್ಪ ಸೂಕ್ಷ್ಮವಾದದ್ದು. ಮೈ ಕೈಗೆ ಸೊನೆ ತಾಗಿದರೆ ಗಾಯ ಖಚಿತ. ಎಳೆಯ ಹಸಿ ಬೀಜಗಳನ್ನು ಸಂಗ್ರಹಿಸಿ, ಅದಕ್ಕೆ ತೆಂಗಿನ ಕಾಯಿ ತುರಿಯ ಒಗ್ಗರಣೆ ಜೊತೆ, ನೀರುಬೆಲ್ಲ ಬೆರೆಸಿದಾಗ, ಗೋವೆ ಬೀಜದ ಪಲ್ಯ ತಯಾರಾದಂತೆ. ಈ ಸೀಪಲ್ಯದ ರುಚಿಯೂ ಕರಾವಳಿಯ ಅಪರೂಪದ ಬಾಲ್ಯದ ಪಟ್ಟಿಯಲ್ಲಿ ಸೇರಿ ಹೋಗಿದೆ.
ಗೋವೆ ಬೀಜವನ್ನು ಸುಟ್ಟು ತಿನ್ನುವ ಕೆಲಸವೂ ವಿಶಿಷ್ಟ. ಗೋವೆಬೀಜವನ್ನು ಹುರಿಯಲು ಒಂದು ದೊಡ್ಡ ಮಡಕೆ ಓಡಿನ ಅವಶ್ಯಕತೆ ಉಂಟು. ಮಡಕೆ ಓಡು ಸಿಗದಿದ್ದರೆ ದೊಡ್ಡ ಡಬ್ಬಿ ತಗಡು ಆದರೂ ಪರವಾಗಿಲ್ಲ. ನಮ್ಮ ಮನೆಗೆ ಮಕ್ಕಳು, ಬಂಧುಗಳು ಬಂದಾಗ, ಗೋವೆಬೀಜ ಸುಡುವ ಸಂಭ್ರಮ ಇಲ್ಲಿ ನೆನಪಾಗುತ್ತದೆ. ಸಂಜೆಯ ಸಮಯ ಮನೆ ಮುಂದಿನ ಅಂಗಳದ ಮೂಲೆಯ ಒಲೆಯಲ್ಲಿ ಬೆಂಕಿ ಹಚ್ಚಿ ಅದರ ಮೇಲೆ ಒಂದು ದೊಡ್ಡ ತಗಡನ್ನು ಇಡುತ್ತಾರೆ. ಚೆನ್ನಾಗಿ ಒಣಗಿಸಿದ ಬೀಜಗಳನ್ನು ತಂದು ಅದರ ಮೇಲೆ ಹರವುತ್ತಾರೆ. ಇದೆಲ್ಲಾ ಸಾಮಾನ್ಯವಾಗಿ ಅಮ್ಮಾಮ್ಮನ ಕೆಲಸ. ನಾಲ್ಕೈದು ನಿಮಿಷಗಳಲ್ಲಿ ಗೋವೆಬೀಜಗಳು ಸೊನೆ ಕಾರತೊಡಗುತ್ತವೆ. `ಹಿಸ್' `ಪುಸ್' ಎಂದು ಸದ್ದು ಮಾಡುತ್ತಾ ಕಪ್ಪನೆಯ ಸೊನೆಯನ್ನು ದೂರಕ್ಕೆ ಸಿಡಿಸುವೂದು ಉಂಟು. ಗೋವೆ ಬೀಜವನ್ನು ಸುಡುವುದನ್ನು ನೋಡುತ್ತಾ ನಿಂತಿರುವ ಮಕ್ಕಳು ದೂರ ಹೋಗಬೇಕೆಂಬ ಸೂಚನೆ ಅದು. ಅದರ ಸೊನೆ ಮೈಗೋ, ಮುಖಕ್ಕೋ ತಾಗಿದರೆ ಗಾಯವಾಗಿ ಕಲೆಯಾಗಿ ಬಿಟ್ಟೀತು ಎಂಬ ಭಯ. ಗೋವೆಬೀಜಗಳು ಸೊನೆ ಕಾರಿದ ಕೂಡಲೆ ಕೆಳಗಿನ ಒಲೆಯಿಂದ ಚೂರು ಬೆಂಕಿಯನ್ನು ಎತ್ತಿ ಮೇಲಿನ ತಗಡಿಗೆ ಹಾಕುತ್ತಾರೆ. ಒಮ್ಮೆಗೇ `ಭಗ್' ಎಂದು ಇಡೀ ತಗಡಿಗೆ ಬೆಂಕಿ ಹತ್ತುತ್ತದೆ. ಸೊನೆ ಕಾರಿದ ಬೀಜಗಳೆಲ್ಲ ಧಗಧಗನೆ ಬೆಂಕಿಯಿಂದ ಉರಿಯಲು ಆರಂಭವಾಗುತ್ತದೆ. ಒಂದೈದು ನಿಮಿಷಗಳಲ್ಲಿ ಅವನ್ನೆಲ್ಲ ಈಚೆಗೆ ನೆಲಕ್ಕೆ ಸುರಿದು ಬೆಂಕಿ ಆರಿಸಿ ಇನ್ನೂ ಬಿಸಿ ಇರುವಾಗಲೇ ಕಲ್ಲಿನಿಂದ ಕುಟ್ಟಬೇಕು. ಆಗ ಹೊರಗಿನ ಕವಚ ಬೇರೆಯಾಗಿ ಒಳಗಿನ ಬೀಜ ಕೈಗೆ ಸಿಗುತ್ತದೆ. ಕಲ್ಲಿನಿಂದ ಕುಟ್ಟಿ ಕವಚ ಬೇರೆ ಮಾಡುವುದು ಸೂಕ್ಷ್ಮವಾದ ಕೆಲಸ. ಬೀಜಗಳನ್ನು ಮನೆಗೆ ತಂದ ನಂತರ, ಬಾಕಿ ಉಳಿದ ಕೆಲಸ ಒಂದೇ - ತಿನ್ನುವ ಕೆಲಸ. ಬಿಸಿ ಬಿಸಿ ಗೋವೆ ಬೀಜದ ಜೊತೆ ಹುರಿದ ಹಲಸಿನ ಹಪ್ಪಳ ಇದ್ದರಂತೂ ರುಚಿಯು ದುಪ್ಪಟ್ಟಾದೀತು!
ಗೋವೆ ಹಣ್ಣಿನ ರುಚಿ ಅಷ್ಟೇನೂ ವಿಶೇಷ ಇಲ್ಲ. ಕನರು, ಕನರು ರುಚಿಯ, ಹುಳಿ ಸಿಹಿ ಮಿಶ್ರಣದ ಗೋವೆ ಹಣ್ಣನ್ನು ಜಾಸ್ತಿ ತಿಂದರೆ ಕೆಮ್ಮು ಬರುತ್ತದೆಂದು ಹಿರಿಯರು ಗದರಿಸುತ್ತಿದ್ದರು. ಆದರೂ ಬೇಸಿಗೆಯ ಬಿಸಿಗೆ ಹೆಚ್ಚು ರಸವಿರುವ ಗೋವೆ ಹಣ್ಣನ್ನು ತಿಂದರೆ ಬಾಯಾರಿಕೆ ಕಡಿಮೆ ಆದೀತು ಎಂದು ಮಕ್ಕಳು ಗೋವೆ ಹಣ್ಣನ್ನು ತಿಂದದ್ದೇ ತಿಂದದ್ದು. ಅದರ ರಸ ಬಿದ್ದ ಜಾಗದಲ್ಲಿ ಬಟ್ಟೆ ಪೂರ್ತಿ ಕಲೆ ಕಲೆ! ಬಿಳಿ ಬಿಳಿ ಅಂಗಿಯ ಗೋವೆ ಹಣ್ಣಿನ ಗಾಯ ಮುಗಿಯುವ ಸಮಯಕ್ಕೆ ಕೆಂಪು ಕೆಂಪು ಕಲೆಗಳಿಂದ ತುಂಬಿ ಹೋಗುತ್ತಿತ್ತು! ನಾವು ಓದಿದ ಹೈಸ್ಕೂಲಿನ ಆಟದ ಮೈದಾನದ ಸುತ್ತಲೂ ಹತ್ತಾರು ಗೋವೆ ಮರಗಳು ಒಂದೊಂದು ಮರದಲ್ಲಿ ರುಚಿಯ ಹಣ್ಣುಗಳು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ, ಬಣ್ಣ ಬಣ್ಣದ ಗೋವೆ ಹಣ್ಣುಗಳಿಗೆ ಕಲ್ಲು ಹೊಡೆದು ಬೀಳಿಸುವುದೇ ನಮ್ಮ ಕೆಲಸ. ಗೋವೆ ಹಣ್ಣುಗಳನ್ನು ನಮ್ಮ ಕರಾವಳಿಯಲ್ಲಿ ಗಂಟಿಗೆ ಹಾಕುವುದೇ ಜಾಸ್ತಿ. ಗೋವಾದಲ್ಲಿ ಫೆನ್ನಿ ತಯಾರಿಸಲು ಉಪಯೋಗವಾಗುತ್ತದೆ. ಘಟ್ಟದ ಮೇಲಿನ ಊರುಗಳಲ್ಲಿ ಗೋವೆ ಹಣ್ಣನ್ನು ಕುಕ್ಕೆಯಲ್ಲಿಟ್ಟು ಮಾರುವುದೂ ಉಂಟು. ಮುಖ್ಯವಾಗಿ ಶಾಲೆ ಮಕ್ಕಳೇ ಅದಕ್ಕೆ ಗಿರಾಕಿ.
ಈ ವರ್ಷ ಗೋವೆ ಬೀಜಕ್ಕೆ ಒಳ್ಳೆಯ ಬೆಲೆ ಬಂದಿದೆ. ಕರಾವಳಿಯ ಗೋವೆ ಬೀಜದ ಕಾರ್ಖಾನೆಗಳು ಈ ಸುತ್ತಲಿನ ಹಲವರಿಗೆ ಉದ್ಯೋಗ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಕಚ್ಛಾ ಗೋಡಂಬಿಯನ್ನು ವಿದೇಶದಿಂದ ತರಿಸಬೇಕಾದ ಪರಿಸ್ಥಿತಿಯು, ಆ ಉದ್ಯಮಕ್ಕೆ ಒಂದು ಅನಿಶ್ಟತತೆಯನ್ನು ರೂಪಿಸಿದೆ ಎನ್ನಬಹುದು. ಮುಖ್ಯವಾಗಿ ರಫ್ತನ್ನು ಅವಲಂಭಿಸಿರುವ ಗೋಡಂಬಿ ಉದ್ಯಮವು ವಿಶ್ವದೆಲ್ಲೆಡೆ ಹರಡಿರುವ ರಿಸೆಶನ್‌ನಿಂದಾಗಿ, ಹೆಚ್ಚಿನ ಏರುಪೇರಿಗೆ ಒಳಗಾಗುವ ಸಂಭವವು ಸಹಜವೇ .
ಎಂ. ಶಶಿಧರ ಹೆಬ್ಬಾರ್ ಹಾಲಾಡಿ
Wednesday, May 27, 2009
Subscribe to:
Post Comments (Atom)
No comments:
Post a Comment