ಮಾವಿನ ಮಿಡಿ
ಗೋರಾಜೆ ಶಾಲೆಯಿಂದ ಮನೆಗೆ ವಾಪಾಸು ಬರುವಾಗ, ಹುಡುಗರಲ್ಲಿ ಒಂದು ಸುದ್ಧಿ ಹಬ್ಬಿತು. `ಮುತ್ತಯ್ಯ ಶೆಟ್ರ ಮನೆ ಹತ್ತಿರ ಮಾವಿನಮಿಡಿ ಕೊಯ್ತರಂಬ್ರು' ನಮ್ಮ ಹುಡುಗರ ಸೈನ್ಯ, ದಾರಿ ಬದಲಿಸಿ, ನೆಟ್ಟಗೆ ಮುಡಾರಿಯ ಹಾಡಿದಾರಿ ಹಿಡಿದು, ಮುತ್ತಯ್ಯ ಶೆಟ್ರ ಮನೆ ಹತ್ತಿರ ಸಾಗಿತು. ಗುಡ್ಡೆ ಬದಿಯ ಎತ್ತರವಾದ ಮಾವಿನ ಮರದಲ್ಲಿ ಯಾರೋ ಕುಳಿತು ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದುದು ದೂರದಿಂದಲೇ ಕಾಣುತ್ತಿತ್ತು. ಮರದ ಬುಡಕ್ಕೆ ಹೋಗಿ ನೋಡಿದರೆ ನಾಲ್ಕೆಂಟು ಮಂದಿ ನೆರೆಹೊರೆಯವರು ಚೀಲ ಅಥವಾ ಕುಕ್ಕೆ ಹಿಡಿದುಕೊಂದು ತಲೆ ಮೇಲೆತ್ತಿ, ಮಾವಿನ ಮರದ ತುದಿಯನ್ನೇ ನೋಡುತ್ತಿದ್ದರು. ಮೇಲೇರಿದಾತ ಮಾವಿನ ಮಿಡಿಯನ್ನು ಕೊಯ್ಯುತ್ತಿದ್ದ. ಅವನ ಕೈ ತಪ್ಪಿ ಕೆಳಗೆ ಬಿದ್ದಿದ್ದ ಮಿಡಿಗಳನ್ನು ನಾವೆಲ್ಲ ಆರಿಸಿ ತಿನ್ನುತ್ತಿದ್ದೆವು. ಮಕ್ಕಳೆಲ್ಲ ಮನೆಗೆ ಹೋಯಿನಿ? ಎಂದು ಗದರಿಸಿದ್ದು ಯಾರೆಂದು ನೋಡಿದರೆ ನಮ್ಮ ಅಮ್ಮಮ್ಮಾ ಮಾವಿನ ಮಿಡಿ ತರಲು ಅವರೂ ಬಂದು, ಆ ಮರದ ಬುಡದಲ್ಲಿ ನಿಂತಿದ್ದರು. ನಾಲ್ಕಾರು ಮಿಡಿತಿಂದು ನಾವೆಲ್ಲ ಮನೆಗೆ ಹೋದೆವು. ಸ್ವಲ್ಪ ಹೊತ್ತಾದ ನಂತರ ಒಂದು ಕುಕ್ಕೆಯ ತುಂಬ ಮಾವಿನ ಮಿಡಿಯ ವಾಸನೆ ಘಂ ಎಂದು ತುಂಬಿಕೊಂಡಿತು. ಅದಾಗಲೇ ಸಂಜೆಗತ್ತಲು. ಅಮ್ಮಮ್ಮ ಮೆಟ್ಟು ಕತ್ತಿಯ ಮುಂದೆ ಕುಳಿತು, ಮಾವಿನ ಮಿಡಿಗಳನ್ನು ಸೋಸಲು ತೊಡಗಿದರು. `ಇವತ್ತು ರಾತ್ರಿಯೇ ಉಪ್ಪಿಗೆ ಹಾಕಿ ಇಡ್ಕ್ , ಮತ್ತೆ ಹಾಂಗೆ ಬಿಟ್ರೆ ಮಿಡಿ ಹಾಳಾತ್' ಎನ್ನುತ್ತಾ ಒಂದೊಂದೇ ಮಿಡಿಯನ್ನು ಆರಿಸಿ ಅದರ ಬೊಟ್ಟು ಎಷ್ಟು ಬೇಕೋ ಉಳಿಸಿಕೊಂಡು ದಂಟನ್ನು ಕತ್ತರಿಸಿ ಮತ್ತೊಂದು ಕಡೆ ರಾಶಿ ಹಾಕುತ್ತಿದ್ದರು.
ಉಪ್ಪಿನಕಾಯಿ ಮಾಡಲು ಆರಿಸುವ ಮಾವಿನ ಮಿಡಿಗೆ ಅದರದ್ದೇ ಆದ ಒಂದು ಹದ ಇದೆ, ಮಿಡಿಗಳು ಹದವಾಗಿ ಬಲಿತಿರಬೇಕು. ಒಳಗಿರುವ ಕೊಂಗಿಲ ಸ್ವಲ್ಪ ಮೃದುವಾಗಿರಬೇಕು. ಗೊರಟು ಆಗಲು ಆರಂಭವಾಗಿರಬಾರದು. ಮಿಡಿ ಕೊಯ್ಯುವಾಗ ಮಿಡಿಗೆ ಗಾಯವಾಗಿರಬಾರದು, ಮಾವಿನ ಮಿಡಿ ಬಿಸಿಲಿಗೆ ಸುಟ್ಟ್ಟು ಕಪ್ಪಾಗಿರಬಾರದು, ಸೊನೆ ಸುಟ್ಟಿರಬಾರದು. ಒಂದೇ ಗಾತ್ರದ ಮಿಡಿಗಳನ್ನು ಆರಿಸಿ ಪ್ರತ್ಯೇಕಿಸಿದ ನಂತರ ಅಮ್ಮಮ್ಮ ಉಪ್ಪಿನ ಭರಣಿಯಲ್ಲಿ ತುಂಬುತ್ತಿದ್ದರು.
ದೊಡ್ಡ ಪಾತ್ರೆಗೆ ತಳದಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ, ಅದರ ಮೇಲೆ ಒಂದು ಪದರ ಮಾವಿನ ಮಿಡಿ ಹಾಕುತ್ತಾರೆ. ಅದರ ಮೇಲೆ ಪುನಃ ಒಂದಿಂಚು ಉಪ್ಪಿನ ಪದರ ಅದರ ಮೇಲೆ ಮಿಡಿ ಪುನಃ ಉಪ್ಪಿನ ಪದರ ಈ ರೀತಿ ಪಾತ್ರೆ ತುಂಬುವ ತನಕ ಮಿಡಿ ಮತ್ತು ಉಪ್ಪು ತುಂಬಿಸಿ ಪಾತ್ರೆಯ ಮೇಲೆ ಭಾರಕ್ಕೆಂದು ಸೀತಾನದಿಯಿಂದ ತಂದ ದೊಡ್ಡ ಒರೆಯುವ ಕಲ್ಲುಗಳನ್ನು ಇಡುತ್ತಾರೆ , ಆ ಕಲ್ಲುಗಳ್ಯಾಕೆ `ಮಿಡಿ ಸಮಾ ಚಿರುಟಬೇಕು'.
ಒಂದೆರಡು ದಿನ ಉಪ್ಪಿನಲ್ಲಿ ಕುಳಿತ ಮಿಡಿಗಳು ಚಿರುಟುತ್ತವೆ, ಕಲ್ಲು ಉಪ್ಪು ಮಿಡಿಯ ನೀರನ್ನು ಹೀರಿಕೊಂಡು ಪಾತ್ರೆಯ ತುಂಬಾ ಉಪ್ಪಿನ ನೀರು ತುಂಬುತ್ತದೆ.-ಮಾವಿನ ಮಿಡಿಗಳು ಗಾತ್ರದಲ್ಲಿ ಚಿಕ್ಕದಾಗಿ ಚಿರುಟುತ್ತವೆ. ಆ ಮಿಡಿಗಳನ್ನು ಆರಿಸಿ ನೆರಳಿನಲ್ಲಿ ಒಣಗಿಸಬೇಕು. ಅಮ್ಮಮ್ಮಾ ಮಿಡಿಗಳನ್ನು ಆರಲು ಹಾಕುತ್ತಿದ್ದ ಜಾಗವೆಂದರೆ ಮಧ್ಯದ ಪಡಸಾಲೆಯ ನೆಲದಲ್ಲಿ. ಉಪ್ಪಿನಲ್ಲಿ ಚಿರುಟಿದ ಮಿಡಿಗಳು ಪಡಸಾಲೆಯ ನೆಲದಲ್ಲಿ ಹರಡಿಕೊಂಡಾಗ ಮನೆ ತುಂಬ ಆ ಮಿಡಿಯದೇ ಪರಿಮಳ. ಅಮ್ಮಮ್ಮನ ಕಣ್ಣು ತಪ್ಪಿಸಿ ನಾವು ಒಂದೊಂದೇ ಮಿಡಿಯನ್ನು ತಿನ್ನುವುದು ಉಂಟು. ನೀರಿಗೆ ಹಾಕಿದ ಮಿಡಿಗಳಲ್ಲಿ ಒಂದೊಂದು ಬಣ್ಣಗೆಟ್ಟು ನೀರು ನೀರಾಗಿ ಇರುತ್ತಿತ್ತು. ಅದನ್ನು ತಿನ್ನಲು ಪರವಾನಗಿ ಉಂಟು, ಏಕೆಂದರೆ ಆ ಮಿಡಿಯನ್ನು ಉಪ್ಪಿನಕಾಯಿ ಮಾಡಿದರೆ ಬೇಗ ಕೆಟ್ಟು ಹೋಗುತ್ತದಂತೆ.
`ಮಿಡಿ ನೆನಸಿದರೆ ಸಾಕಾ? ಮೆಣಸಿನ ಕಾಯಿ ತರ್‍ಕಲೆ? ಅಂಗಡಿಯಿಂದ ಒಳ್ಳೆಯ ಮೆಣಸಿನ ಕಾಯಿ ತಂದು ಉಪ್ಪಿನಕಾಯಿ ಮಾಡುವ ಸಂಭ್ರಮ. ಮೆಣಸಿನ ಕಾಯಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಸ್ವಲ್ಪ ಕುಟ್ಟಿ ನಂತರ ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯುವಿಕೆ! ಆಗ ಇನ್ನೂ ಮೆಣಸಿನ ಪುಡಿ ಮಾಡುವ ಮಿಲ್ ನಮ್ಮೂರಿಗೆ ಬಂದಿರಲಿಲ್ಲ. ದೊಡ್ಡ ಅರೆಯುವ ಕಲ್ಲಿನಲ್ಲಿ ಮೆಣಸಿನ ಕಾಯಿ ಹಾಕಿ ಕುದಿಸಿದ ಉಪ್ಪು ನೀರನ್ನು ಬೆರೆಸಿ, ಚೆನ್ನಾಗಿ ಅರೆಯುವ ಕೆಲಸ ನಿಜಕ್ಕೂ ಕಷ್ಟದ್ದು. ಅರೆಯುವಾಗ ಸಾಸಿವೆ, ಇಂಗು ಬೆರೆಸುತ್ತಿದ್ದರು. ಅರೆದು ಅರೆದು ಒಳ್ಳೆಯ ಉಪ್ಪಿನಕಾಯಿ ರಸ ತಯಾರಾದಾಗ ಪಿಂಗಾಣಿ ಜಾಲಿ ಅಟ್ಟದಿಂದ ಕೆಳಗಿಳಿಯುತ್ತದೆ. ಚೊಕ್ಕಟ ಮಾಡಿದ ದೊಡ್ಡ ಜಾಲಿಯಲ್ಲಿ ಚಿರುಟಿದ ಮಾವಿನ ಮಿಡಿಗಳನ್ನು ಹಾಕಿ, ಮೆಣಸಿನ ಕಾಯಿ ರಸವನ್ನು ತುಂಬಿಸಿದರೆ ಉಪ್ಪಿನಕಾಯಿ ತಯಾರು. ಪಿಂಗಾಣಿ ಭರಣಿಯ ಬಾಯಿಗೆ ಬಟ್ಟೆ ಸುತ್ತಿ ಮುಚ್ಚಳವನ್ನು ಭದ್ರವಾಗಿ ತಿರುಪಿ, ಪುನಃ ಅಟ್ಟದ ಮೇಲೆ ಇಡುತ್ತಾರೆ. `ಅದೇನಿದ್ದರೂ ಈ ಜಾಲಿಯ ಉಪ್ಪಿನಕಾಯಿಯನ್ನು ಮಳೆಗಾಲ ಬರುವ ತನಕ ಮುಟ್ಟಬಾರದು.' ಎನ್ನುತ್ತಿದ್ದರು ಅಮ್ಮಮ್ಮಾ. ದಿನದ ಉಪಯೋಗಕ್ಕೆ ಬೇರೆ ಚಿಕ್ಕ ಮರಿಗೆಯಲ್ಲಿ ಸ್ವಲ್ಪ ಉಪ್ಪಿನಕಾಯಿ ಹಾಕಿಡುತ್ತಿದ್ದರು. ಮುಖ್ಯವಾಗಿ ಮಿಡಿ ಉಪ್ಪಿನಕಾಯಿಯನ್ನು ಸಾಧ್ಯವಾದಷ್ಟು ದಿನ ಕಾಪಿಡುವುದೇ ಒಂದು ಹೆಮ್ಮೆಯ ವಿಚಾರ. `ಎರಡು ವರ್ಷ ಇಟ್ಟರೂ ಈ ಉಪ್ಪಿನಕಾಯಿ ಲಾಯಕ್ ಇರತ್' ಎನ್ನುವಾಗ ಅಮ್ಮಮ್ಮನಿಗೆ ಹೆಮ್ಮೆ. ಜಾಸ್ತಿ ಮಾವಿನ ಮಿಡಿಗಳು ಸಿಗುವ ವರ್ಷ ಸ್ವಲ್ಪ ಹೆಚ್ಚಾಗಿಯೇ ಉಪ್ಪಿನಕಾಯಿ ಮಾಡಿ ಬಂಧುಗಳಿಗೆ ಸ್ನೇಹಿತರಿಗೆ ಸ್ವಲ್ಪ ಕಳಿಸಿಕೊಡುವುದೂ ಉಂಟು. ಅಕ್ಕಪಕ್ಕದ ಮನೆಗಳಿಗೂ ಕೊಡುತ್ತಿದ್ದರು. ಆಸಾಡಿಯ ಮಳೆ ಬೀಳುವಾಗ ಹಿಂದಿನ ಮನೆಯ ನರ್‍ಸಿ ಬಂದು `ನಮ್ಮ ಲಚ್ಚುಗೆ ಸ್ವರ ಬಂದ್ ಬಾಯಿ ರುಚಿ ಇಲ್ಲೆ ಕಾಣಿ, ಒಂಚೂರು ಉಪ್ಪಿನಕಾಯಿ ಕೊಡಿನಿ' ಎಂದು ಅಂಗಲಾಚಿದಾಗ ಅಮ್ಮಾಮ್ಮ ಇಲ್ಲ ಅನ್ನುವವರಲ್ಲ. ಚಿಕ್ಕ ಲೋಟದಲ್ಲಿ ಸ್ವಲ್ಪ ರಸ ಜಾಸ್ತಿಯೇ ಹಾಕಿ ನಾಲ್ಕೆಂಡು ಮಿಡಿ ಉಪ್ಪಿನ ಕಾಯಿಯನ್ನು ಕೊಡುತ್ತಿದ್ದರು. “ನಿಮ್ಮ ಉಪ್ಪಿನಕಾಯಿ ತಿಂದೇ ನಮ್ಮ ಲಚ್ಚು ಜ್ವರ ಬಿಡ್ತ್ ಕಾಣಿ “ ಎಂದು ನಂತರ ನರ್‍ಸಿ ಜಾಪಿನಿಂದ ಹೊಗಳುತ್ತಿದ್ದುದೂ ಉಂಟು.
ಒಳ್ಳೆಯ ಮಿಡಿ ಉಪ್ಪಿನಕಾಯಿಯಲ್ಲಿ ಔಷಧೀಯ ಗುಣವೂ ಉಂಟು ಎನ್ನುತ್ತಾರೆ. ಅದಕ್ಕೆ ಬೆರೆಸುವ ಸಾಸಿವೆ, ಇಂಗು ಮೊದಲಾದ ಪರಿಕರಗಳ ಔಷಧೀಯ ಗುಣದ ಜೊತೆ ಮಾವಿನ ಮಿಡಿಯಲ್ಲೂ ಔಷಧೀಯ ಗುಣಗಳು ಇರಲಿಕ್ಕೆ ಬೇಕು. ಮಾವಿನಕಾಯಿಯ ಸೊನೆ ಪರಿಮಳವೇ ಮೂಗಿನ ನೆಗಡಿತನವನ್ನು ದೂರ ಓಡಿಸೀತು! ಒಳ್ಳೆಯ ಅಪ್ಪೆಮಿಡಿ ಚೊಟ್ಟನ್ನು ಮುರಿದಾಗ ಬರುವ ರಸಕ್ಕೆ ಬೆಂಕಿ ತೋರಿಸಿದರೆ ಪೆಟ್ರೋಲಿನ ರೀತಿ ರಸವು ದಹಿಸುತ್ತದೆ. ಜೀರಿಗೆ ಮಾವಿನಮಿಡಿ ಅಪ್ಪೆ ಮಿಡಿಗಳ ಪರಿಮಳವು ಅವುಗಳಲ್ಲಿರುವ ವಿಶಿಷ್ಟ ರಾಸಾಯನಿಕ ವಸ್ತುಗಳ ಮಿಶ್ರಣದಿಂದಲೇ ಬರುವುದು ತಾನೆ. ಅವುಗಳಿಂದ ಮಾಡಿದ ಉಪ್ಪಿನಕಾಯಿ ರಸವನ್ನು ಮಾತ್ರ ಬಳಸಿ ಅನ್ನ ಕಲಸಿ ಊಟ ಮಾಡಿದ ರೋಗಿಗಳು ಬೇಗನೆ ಗುಣಹೊಂದಿದರೆ ಅಚ್ಚರಿಯೇನು ಇಲ್ಲ. ತರಕಾರಿಗಳು ದುರ್ಲಭವಾಗಿದ್ದ ಮಳೆಗಾಲದಲ್ಲಿ ಉಪ್ಪಿನಕಾಯಿ ರಸದಲ್ಲಿ ಕಲಸಿದ ಅನ್ನ ನಿಜಕ್ಕೂ ರುಚಿಕರ. ಇತ್ತ ಮಜ್ಜಿಗೆ ಅನ್ನಕ್ಕೂ ನಂಜಿಕೊಳ್ಳಲು ಮಾವಿನಮಿಡಿಯು ಪ್ರಶಸ್ತ!
ನಮ್ಮ ಮನೆಯ ಮೂಲೆಗದ್ದೆಯ ಅಂಚಿನಲ್ಲಿ ಎತ್ತರವಾದ ಒಂದು ಕಾಟುಮಾವಿನ ಮರವಿತ್ತು. ಅದರ ಮಿಡಿಗಳು ಒಳ್ಳೆಯ ಅಪ್ಪೆ ಮಿಡಿಯ ರುಚಿಯುಳ್ಳದ್ದು ಎನ್ನುತ್ತಿದ್ದರು. ಆದರೆ ಆ ಎತ್ತರದ ಮರದಲ್ಲಿ ಮಿಡಿ ಬಿಟ್ಟಿದ್ದನ್ನೇ ನಾನು ಕಂಡಿಲ್ಲ. ಅದರಲ್ಲಿ ಜಾಸ್ತಿ ಕಾಯಿ ಆಗುವುದಿಲ್ಲ ಎಂಬ ಸಿಟ್ಟಿನಿಂದ ಪ್ರತಿವರ್ಷ ಅದರ ಟೊಂಗೆಗಳನ್ನು ಕಡಿದು ಸುಡುಮಣ್ಣನ್ನು ಮಾಡಿಸುತ್ತಿದ್ದರು ಅಥವಾ ತೋಟದ ಬುಡಮಾಡಲು ಉಪಯೋಗಿಸುತ್ತಿದ್ದರು. ನಮ್ಮ ಮನೆಯ ಹತ್ತಿರವೇ ತೋಟದ ಮೂಲೆಯಲ್ಲಿ ಎರಡು ದೊಡ್ಡ ಕಾಟು ಮಾವಿನ ಮರಗಳಿದ್ದವು. ಒಂದರಲ್ಲಿ ಮಿಡಿ ಕಡಿಮೆ, ಇನ್ನೊಂದರಲ್ಲಿ ಸಾವಿರಾರು ಮಿಡಿಗಳು ಆಗುತ್ತಿದ್ದವು. ಆದರೆ ಆ ಮಿಡಿಗಳಿಗೆ ಪರಿಮಳ ಕಡಿಮೆ; ರುಚಿಯೂ ಕಡಿಮೆ. ಬರೀ ಹುಳಿಯೊಂದೇ ಆ ಮಾವಿನ ಮಿಡಿಗಳ ವಿಶೇಷ. ಅದು `ದಿಂಡಿನಕಾಯಿ' ಎಂದು ಶೃಂಗೇರಿ ಚಿಕ್ಕಮ್ಮ ಹೇಳಿದರು. ತಮ್ಮ ಊರಿನ ಕಡೆಯ ಯಾವುದೋ ಮಾವಿನ ಮರಕ್ಕೆ ಹೋಲಿಸುತ್ತಾ ಸ್ವಲ್ಪ ಒಳ್ಳೆಯ ಪರಿಮಳವಿರುವ ಮಿಡಿಬೇಕೆಂದಾಗ ಅಬ್ನಿಕಟ್ಟೆ ಅಥವಾ ತಾರಿಕಟ್ಟೆಯಿಂದ ಮಾವಿನ ಮಿಡಿಗಳನ್ನು ಅಮ್ಮಮ್ಮ ತರಿಸುತ್ತಿದ್ದರು. ಸಾಕಷ್ಟು ಉಪ್ಪಿನಕಾಯಿ ಮಾಡಿದ ಮೇಲೂ ಎಲ್ಲಾದರೂ ಒಳ್ಳೆಯ ಮಾವಿನ ಮಿಡಿ ಸಿಕ್ದಿದರೆ, ತರಿಸಿ ಚೊಟ್ಟು ಕತ್ತರಿಸಿ ಉಪ್ಪಿನಲ್ಲಿ ನೆನಸಿಯೇ ಬಿಡುತ್ತಾರೆ. `ಎರಡು ವರ್ಷ ಇಟ್ಟರೂ ಮಿಡಿ ಉಪ್ಪಿನಕಾಯಿ ಹಾಳಾತಿಲ್ಲೆ' ಎನ್ನುತ್ತಾ ಮೆಣಸಿನ ಕಾಯಿ ಅರೆದು ಮಿಡಿಯ ಜೊತೆಗೆ ಪಿಂಗಾಣಿ ಜಾಲಿಗೆ ತುಂಬಿಸುತ್ತಾರೆ. ಮಾವಿನ ಮಿಡಿ ಎಂದರೆ ಅಮ್ಮಮ್ಮಾನಿಗೆ ಎಲ್ಲಿಲ್ಲದ ಅಂಗಲಾಪು.
- ಎಂ. ಶಶಿಧರ ಹೆಬ್ಬಾರ್ ಹಾಲಾಡಿ
Wednesday, May 27, 2009
Subscribe to:
Post Comments (Atom)
No comments:
Post a Comment